Site icon Vistara News

Amit Shah: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕುತ್ತೇವೆ ಎಂದ ಅಮಿತ್‌ ಶಾ

Amit Shah

ಪಟನಾ: ಬಿಹಾರದ ಸಾಸಾರಾಮ್‌, ಬಿಹಾರ್‌ ಷರೀಫ್‌ ಸೇರಿ ಹಲವೆಡೆ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಬಳಿಕ ಕೋಮುಗಲಭೆ ಹೆಚ್ಚಾಗಿದೆ. ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವುದು, ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೊಳಿಸುವುದು ಸೇರಿ ಹಲವು ರೀತಿಯ ಹಿಂಸಾಚಾರಕ್ಕೆ ನಳಂದಾ ಜಿಲ್ಲೆಯ ವಿವಿಧ ಪ್ರದೇಶಗಳು ನಲುಹೋಗಿವೆ. ಇದರ ಬೆನ್ನಲ್ಲೇ ಅಮಿತ್‌ ಶಾ (Amit Shah) ಅವರು ಬಿಹಾರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕಲಾಗುವುದು” ಎಂದು ಹೇಳಿದ್ದಾರೆ.

ಬಿಹಾರದ ನಾವಡಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಅವರು, “ಬಿಹಾರದ ಸಾಸಾರಾಮ್‌ ಹಾಗೂ ಬಿಹಾರ ಷರೀಫ್‌ನಲ್ಲಿ ಗಲಭೆಕೋರರು ಓಡಾಡಿಕೊಂಡಿದ್ದಾರೆ. ಅವರು ಆಗಾಗ ಗಲಭೆ ಮಾಡುತ್ತಲೇ ಇದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆಗೆ ಕಾರಣರಾಗುವವರನ್ನು ಮಟ್ಟ ಹಾಕಲಾಗುವುದು” ಎಂದು ತಿಳಿಸಿದರು.

ಅಮಿತ್‌ ಶಾ ವಾಗ್ಝರಿ

ನಿತೀಶ್‌ಗೆ ಬಿಜೆಪಿ ಬಾಗಿಲು ಮುಚ್ಚಿದೆ

“ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ. ಜಾತಿವಾದ ಹಾಗೂ ಜಂಗಲ್‌ರಾಜ್‌ನ ವಿಷ ಪಸರಿಸುತ್ತಿರುವ ನಿತೀಶ್‌ ಕುಮಾರ್‌ ಜತೆ ಎಂದಿಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಎಲ್ಲ 40 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿತೀಶ್‌ ಕುಮಾರ್‌ ಪ್ರಧಾನಿ ಆಗಲ್ಲ

“ನಿತೀಶ್‌ ಕುಮಾರ್‌ ಅವರಿಗೆ ಪ್ರಧಾನಿಯಾಗುವ ಆಸೆ ಇದೆ. ಇದೇ ಕಾರಣಕ್ಕೆ ಅವರು ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರಿಗೆ ಸಿಎಂ ಹುದ್ದೆ ಬಿಡಲು ಚಿಂತನೆ ನಡೆಸಿದ್ದಾರೆ. ಆದರೆ, ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುವುದು ಮೋದಿ ಅವರೇ ಎಂಬುದು ಎಲ್ಲರಿಗೂ ಗೊತ್ತಿದೆ. ಜನರ ತೀರ್ಮಾನವೂ ಇದೇ ಆಗಿದೆ. ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಆಗ ನಿತೀಶ್‌ ಕುಮಾರ್‌ ಅವರ ಪ್ರಧಾನಿ ಕನಸು ಭಗ್ನವಾಗುತ್ತದೆ. ತೇಜಸ್ವಿ ಯಾದವ್‌ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನೂ ಬಿಟ್ಟುಕೊಡಬೇಕಾಗುತ್ತದೆ” ಎಂದು ಕುಟುಕಿದ್ದಾರೆ.

ಮಹಾಘಟಬಂಧನ್‌ ಸರ್ಕಾರ ಇದ್ದಾಗ ಲಾಲು ಪ್ರಸಾದ್‌ ಯಾದವ್‌ ಹಾಗೂ ನಿತೀಶ್‌ ಕುಮಾರ್‌ ಅವರು ಓಲೈಕೆಯ ರಾಜಕಾರಣ ಮಾಡಿದರು. ಹಾಗಾಗಿಯೇ, ಗಲಭೆ, ಭಯೋತ್ಪಾದನೆ ಕೃತ್ಯಗಳು ಹೆಚ್ಚಾದವು. ಆದರೆ, ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದರು. ಕಾಂಗ್ರೆಸ್‌, ಆರ್‌ಜೆಡಿ, ಜೆಡಿಯು, ಸಿಪಿಎಂ ಸೇರಿ ಹಲವು ಪಕ್ಷಗಳು ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದವು. ಆದರೆ, ಮೋದಿ ಅವರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು ಎಂದು ಹೇಳಿದರು.

ಇದನ್ನೂ ಓದಿ: Bomb Blast: ಬಿಹಾರ ಉದ್ವಿಗ್ನ; ಇಂದು ಅಮಿತ್​ ಶಾ ಭೇಟಿ ನೀಡಬೇಕಿದ್ದ ಸ್ಥಳದಲ್ಲಿ ಬಾಂಬ್​ ಸ್ಫೋಟ, ಐವರಿಗೆ ಗಾಯ

Exit mobile version