Site icon Vistara News

Drought In India: ಹೆಚ್ಚುತ್ತಿದೆ ತಾಪಮಾನ; ಭಾರತದಲ್ಲಿ ಈ ಬಾರಿ ಬರಗಾಲ? ಜಾಗತಿಕ ವಿಶ್ಲೇಷಣೆ ಏನು?

drought situation

ನವದೆಹಲಿ: ಬೇಸಿಗೆ ಆರಂಭವಾಗುವ ಮೊದಲೇ ಬೇಸಿಗೆಯ ಅನುಭವವಾಗುತ್ತಿದೆ. ಮಾರ್ಚ್‌ ಮುಗಿಯುವ ಮೊದಲೇ ಸೂರ್ಯ ದಿನೇದಿನೆ ಪ್ರಖರವಾಗುತ್ತಿದ್ದಾನೆ. ಎಲ್ಲ ರಾಜ್ಯಗಳಲ್ಲೂ ಬೇಸಿಗೆಯನ್ನು ಎದುರಿಸಲು, ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ, ಜಾಗತಿಕ ಹವಾಮಾನ ಸಂಸ್ಥೆಗಳು ಭಾರತದಲ್ಲಿ ಸುರಿಯುವ ಮುಂಗಾರಿನ ಕುರಿತು ವರದಿ ಪ್ರಕಟಿಸಿವೆ. ವರದಿಯ ಅಂಶಗಳನ್ನು ಗಮನಿಸಿದರೆ, ಭಾರತಕ್ಕೆ ಈ ಬಾರಿ ಬರಗಾಲ (Drought In India) ಕಾಡುತ್ತದೆ ಎಂಬುದು ತಿಳಿಯುತ್ತಿದೆ. ಇದು ಆತಂಕವನ್ನೂ ಸೃಷ್ಟಿಸಿದೆ.

ದೇಶದಲ್ಲಿ ಅವಧಿಪೂರ್ವ ಮುಂಗಾರು ಆಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಈಗಾಗಲೇ ವರದಿ ಮಾಡಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಈ ಬಾರಿ ವಾಡಿಕೆಗಿಂತ ಶೇ.30ರಷ್ಟು ಮಳೆ ಕಡಿಮೆಯಾಗಲಿದೆ. ಸಾಮಾನ್ಯವಾಗಿ ವಾಡಿಕೆಗಿಂತ ಶೇ.10ರಷ್ಟು ಮಳೆ ಪ್ರಮಾಣ ಕಡಿಮೆಯಾದರೆ, ಅದನ್ನು ಬರಗಾಲ ಎನ್ನಲಾಗುತ್ತದೆ. ಹೀಗಿರುವಾಗ, 30ರಷ್ಟು ಕುಂಠಿತವಾದರೆ, ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಗಳ ವರದಿ ಪ್ರಕಾರ ಈ ವರ್ಷ ಭಾರತದಲ್ಲಿ ವಾಡಿಕೆಗಿಂತ ಶೇ.30 ರಷ್ಟು ಕಡಿಮೆ ಮಳೆಯಾಗಲಿದೆ. ಫೆಸಿಫಿಕ್​ ಸಾಗರ ವ್ಯಾಪ್ತಿಯ ಮೋಡಗಳ ರಚನೆ ವಿಶ್ಲೇಷಿಸಿದರೆ ಶೇ.60ರಷ್ಟು ಎಲ್​ ನಿನೋ ಎಫೆಕ್ಟ್ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಇದರೊಂದಿಗೆ 5 ವರ್ಷಗಳ ನಂತರ ಮತ್ತೆ ಭಾರತಕ್ಕೆ ಬರಗಾಲದ ಆತಂಕ ಎದುರಾಗಿದೆ. 122 ವರ್ಷಗಳ ನಂತರ ಭಾರತದಲ್ಲಿ ಫೆಬ್ರವರಿಯ ಉಷ್ಣಾಂಶ ದಾಖಲೆ ಬರೆದಿತ್ತು. ಇಷ್ಟೆಲ್ಲ ಅಂಶಗಳು ಭಾರತದಲ್ಲಿ ಆತಂಕ ಸೃಷ್ಟಿಸಿವೆ.

ಬೀರುವ ಪರಿಣಾಮ ಏನು?

ಭಾರತದಲ್ಲಿ 2018ರಲ್ಲಿ ಎಲ್‌ನಿನೋ ಪರಿಣಾಮ ಉಂಟಾಗಿತ್ತು. ಅವಧಿಪೂರ್ವ ಮುಂಗಾರು ಆಗಮನವಾಗಿ, ಜೂನ್‌ನಲ್ಲಿ ಬಿತ್ತನೆ ಮಾಡಿದ ರೈತರು ಫಸಲು ಬಾರದೆ ಕಷ್ಟ ಅನುಭವಿಸಿದರು. ಇದೇ ರೀತಿ 2009, 2014, 2015ರಲ್ಲೂ ಭಾರತ ಕಷ್ಟ ಅನುಭವಿಸಿತ್ತು. ಮುಂಗಾರು ಕೈಕೊಟ್ಟು ಬರಗಾಲ ಎದುರಾದರೆ ಭಾರತದ ಅಭಿವೃದ್ದಿ ಕುಂಠಿತವಾಗಲಿದೆ. ಅದರಲ್ಲೂ, ರೈತರ ಬೆಳೆ ಮೇಲೆ ನೇರ ಪರಿಣಾಮ ಉಂಟಾಗಲಿದೆ. ದೇಶದ ಉತ್ಪಾದನೆ ಕುಂಠಿತವಾಗಿ ಕೈಗಾರಿಕೆಗಳಿಗೆ ಕಚ್ಚಾ ವಸ್ತು ಕೊರತೆ ಆಗಲಿದೆ. ಇದರಿಂದ ಮತ್ತೆ ಹಣದುಬ್ಬರ ಏರಿಕೆ ಸಾಧ್ಯತೆ ಇದೆ. ಆಹಾರದ ಕೊರತೆಯೂ ಬಾಧಿಸಲಿದೆ.

ಇದನ್ನೂ ಓದಿ: Kerala Weather: ಕೇರಳದಲ್ಲಿ ದಾಖಲೆಯ ತಾಪಮಾನ, ಪರಿತಪಿಸುತ್ತಿರುವ ಜನರು

ಏನಿದು ಎಲ್‌ನಿನೋ?

ಮಳೆಯ ತೀವ್ರತೆ ಕುರಿತು ವಿಶ್ಲೇಷಿಸುವುದೇ ಎಲ್‌ನಿನೋ ಹಾಗೂ ನಿನಿಲೋ ಆಗಿದೆ. ಎಲ್‌ನಿನೋ ಎಫೆಕ್ಟ್‌ ಎಂದರೆ ಕಡಿಮೆ ಮಳೆಯ ಸೂಚನೆ ಎಂದರ್ಥ. ಹಾಗೆಯೇ, ನಿನಿಲೋ ಪರಿಣಾಮ ಎಂದರೆ ಸಾಮಾನ್ಯ ಅಥವಾ ಅಧಿಕವಾಗಿ ಮಳೆಯಾಗುತ್ತದೆ ಎಂಬರ್ಥವಿದೆ. ಪೆಸಿಫಿಕ್‌ ಸಾಗರದಲ್ಲಿ ರಚನೆಯಾಗುವ ಮೋಡಗಳ ಆಧಾರದ ಮೇಲೆ ಈ ವಿಶ್ಲೇಷಣೆ ಮಾಡಲಾಗುತ್ತದೆ.

Exit mobile version