Site icon Vistara News

ಮೆಟ್ಟಿಲು ಇಳಿಯುವಾಗ ಆಯ ತಪ್ಪಿದ ಲಾಲು ಪ್ರಸಾದ್‌ ಯಾದವ್‌; ಭುಜ, ಬೆನ್ನಿನಲ್ಲಿ ಫ್ರಾಕ್ಚರ್

Lalu prasad yadav

ಪಟನಾ: ರಾಷ್ಟ್ರೀಯ ಜನತಾದಳದ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರು ಭಾನುವಾರ ಮೆಟ್ಟಿಲು ಇಳಿಯುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪಟನಾದ ಅಸ್ಪತ್ರೆಗೆ ದಾಖಲಿಸಲಾಗಿದೆ.
ಪಟನಾದ ಮನೆಯಲ್ಲಿದ್ದಾಗ ಈ ಘಟನೆ ನಡೆದಿದ್ದು, ಅವರು ಮೇಲಿನ ಮಹಡಿಯಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಆಗ ಅವರ ಭುಜ ಮತ್ತು ಬೆನ್ನಿನ ಭಾಗದಲ್ಲಿ ಸಣ್ಣ ಮೂಳೆ ಮುರಿತ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಪಟನಾದ ಪರಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿರುಕು ದೊಡ್ಡದೇನೂ ಇಲ್ಲ ಎಂದು ಹೇಳಲಾಗಿದೆ. ಆದರೆ, ೭೪ ವರ್ಷದ ಲಾಲು ಪ್ರಸಾದ್‌ ಅವರು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕಾಗಿದೆ.

ಈ ವರ್ಷದ ಆರಂಭದಲ್ಲಿ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಆಗ ಅವರನ್ನು ದಿಲ್ಲಿಯ ಎಐಐಎಂಎಸ್‌ಗೆ ದಾಖಲಿಸಲಾಗಿತ್ತು. ನಿಜವೆಂದರೆ ಲಾಲು ಪ್ರಸಾದ್‌ ಹೆಚ್ಚು ಕಾಲ ದಿಲ್ಲಿಯಲ್ಲೇ ಇದ್ದರು. ಸುಮಾರು ಮೂರುವರೆ ವರ್ಷಗಳ ಬಳಿಕ ಅವರು ಕಳೆದ ಅಕ್ಟೋಬರ್‌ನಲ್ಲಿ ಪಟನಾಗೆ ಮರಳಿದ್ದರು. ಮೇವು ಹಗರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಒಳಗಾದ ಬಳಿಕ ಅವರು ಜೈಲಿನಲ್ಲಿ ಇದ್ದಿದ್ದೇ ಹೆಚ್ಚು. ಆದರೆ, ೨೦೨೧ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದರು.

ಈ ನಡುವೆ, ಅವರ ಸುತ್ತ ಮೇವು ಹಗರಣದ ದೊರಾಂದ ಖಜಾನೆ ಪ್ರಕರಣ ಎದ್ದು ನಿಂತಿದೆ. ಖಜಾನೆಯಿಂದ ದೊಡ್ಡ ಪ್ರಮಾಣದಲ್ಲಿ ಹಣವನ್ನು ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಲಾಲು ಪ್ರಸಾದ್‌ ಅವರು ಅರೋಪಿಯಾಗಿದ್ದಾರೆ. ಅವರಿಗೆ ಕಳೆದ ಏಪ್ರಿಲ್‌ ೨೨ರಂದು ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ನೀಡಿದೆ.

ಇದನ್ನೂ ಓದಿ| ಅಗ್ಗಕ್ಕೆ ಭೂಮಿ ಬದಲಿಗೆ ರೈಲ್ವೆ ಜಾಬ್‌, ಲಾಲು ಕುಟುಂಬಕ್ಕೆ ಕಾಡಿದೆ ಹಳೆ ಹಗರಣ

Exit mobile version