Site icon Vistara News

Road Accident: ಭೀಕರ ರಸ್ತೆ ಅಪಘಾತ; ಖಾಸಗಿ ಬಸ್‌-ಟೆಂಪೊ ಡಿಕ್ಕಿಯಾಗಿ 10 ಮಂದಿ ಸಾವು

Road Accident

ಲಖನೌ: ಉತ್ತರ ಪ್ರದೇಶದ ಬುಲಂದ್ಶಹರ್‌ನ ಸೆಲಾಂಪುರ್‌ನಲ್ಲಿ ಇಂದು (ಆಗಸ್ಟ್‌ 18) ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಖಾಸಗಿ ಬಸ್ ಮತ್ತು ಟೆಂಪೊ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಖಾಸಗಿ ಬಸ್‌ನಲ್ಲಿ ಸುಮಾರು 25 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ (Road Accident).

ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಲ್ಲಿ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಅಪಘಾತದಿಂದ ಕುಪಿತರಾದ ಸ್ಥಳೀಯರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್‌ ಭಾನುವಾರ ಬೆಳಿಗ್ಗೆ ಶಿಕಾರ್ಪುರ್‌ಗೆ ತೆರಳುತ್ತಿತ್ತು. ಮೀರತ್-ಬದೌನ್ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟೆಂಪೊಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬುಲಂದ್ಶಹರ್ ಡಿಎಂ ಚಂದ್ರ ಪ್ರಕಾಶ್ ಸಿಂಗ್ ಅವರು, “ಖಾಸಗಿ ಬಸ್ ಮತ್ತು ಟೆಂಪೊ ನಡುವೆ ಡಿಕ್ಕಿಯಿಂದಾಗಿ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆʼʼ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ನರಗುಂದಲ್ಲಿ ಭೀಕರ ಅಫಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಗದಗ: ಭಾನುವಾರ ಮುಂಜಾನೆ ವೇಳೆ ಸಾರಿಗೆ ಬಸ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ದೇಹಗಳು ಛಿದ್ರಗೊಂಡಿವೆ. ಮೃತಪಟ್ಟವರೆಲ್ಲರೂ ದೇವಸ್ಥಾನಕ್ಕೆ ಹೊರಟಿದ್ದರು. ನೇರವಾದ ರಸ್ತೆಯಲ್ಲಿ ಎರಡೂ ವಾಹನಗಳು ಪರಸ್ಪರ ಅಪ್ಪಳಿಸಿದ್ದು ಸಣ್ಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತಪಟ್ಟವರಾಗಿದ್ದಾರೆ. ಬಸ್​​ ಇಳಕಲ್​ನಿಂದ ಹುಬ್ಬಳ್ಳಿ ಗೆ ಹೊರಟ್ಟಿತ್ತು. ಕಾರು ಹಾವೇರಿಯಿಂದ ಕಲ್ಲಾಪೂರ ಕಡೆಗೆ ಸಾಗುತ್ತಿತ್ತು. ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಕುಟುಂಬವು ಹೊರಟಿತ್ತು. ಕೊಣ್ಣೂರು ಬಳಿಕ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಘಾತಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಫಘಾತಕ್ಕೆ ಯಾರ ನಿರ್ಲಕ್ಷ್ಯ ಎಂಬುದು ಪ್ರಾಥಮಿಕ ಅವಲೋಕನದಲ್ಲಿ ತಿಳಿದುಬಂದಿಲ್ಲ. ಆದರೆ ಬಸ್​​ನ ಆಘಾತಕ್ಕೆ ಕಾರಿನ ರೂಫ್​ ಸಂಪೂರ್ಣವಾಗಿ ಹಾರಿ ಹೋಗಿದೆ. ಅದರೊಳಗೆ ಇದ್ದ ಪ್ರಯಾಣಿಕರು ಸಂಪೂರ್ಣವಾಗಿ ಜರ್ಜರಿತಗೊಂಡು ಮೃತಪಟ್ಟಿದ್ದಾರೆ. ಕಾರಿನ ಮುಂಭಾಗದಲ್ಲಿ ಸೀಟಿನಲ್ಲಿ ದುದ್ರಪ್ಪ ಹಾಗೂ ಪುತ್ರ ವಿಜಯ್ ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ ರಾಜೇಶ್ವರಿ ಹಾಗೂ ಐಶ್ವರ್ಯಾ ಕುಳಿತಿದ್ದು. ಎಲ್ಲರೂ ಕುಳಿತಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಭೀಕರತೆಗೆ ಸಾಕ್ಷಿಯಾಗಿದೆ.

ಅಪಘಾತದ ಬಳಿಕ ಬಸ್​​ ನಿಯಂತ್ರಣ ಪಡೆದುಕೊಳ್ಳದೆ ಹಳ್ಳವೊಂದಕ್ಕೆ ಇಳಿದಿದೆ. ನೇರ ರಸ್ತೆಯಲ್ಲಿ ಎರಡೂ ವಾಹನಗಳು ಗರಿಷ್ಠ ವೇಗದಲ್ಲಿ ಸಾಗುತ್ತಿದ್ದ ಸಾಧ್ಯತೆಗಳು ಕಾಣಿಸುತ್ತಿದೆ. ಕಾರಿಗೆ ಗುದ್ದಿದ ಬಸ್​ನ ಮುಂಭಾಗದಲ್ಲಿ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಹಳ್ಳಕ್ಕೆ ಇಳಿದಿದೆ. ಬಸ್​ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಕುರಿತು ಮಾಹಿತಿ ಲಭ್ಯವಿಲ್ಲ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಮೃತದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.

ಇದನ್ನೂ ಓದಿ: Road Accident : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ; ರಕ್ತಕಾರಿ ಸತ್ತ ಸವಾರ, ಮತ್ತೊಬ್ಬ ಗಂಭೀರ

Exit mobile version