Site icon Vistara News

Road Accident: ಹೆದ್ದಾರಿಯಲ್ಲಿ ಬೈಕ್​, ಕಾರ್​ಗಳಿಗೆ ಡಿಕ್ಕಿ ಹೊಡೆದ ಕಸದ ಲಾರಿ​; 15 ಮಂದಿ ದುರ್ಮರಣ

Road Accident In Maharashtra

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಮುಂಬಯಿ-ಆಗ್ರಾ ಹೆದ್ದಾರಿ (Mumbai Agra Highway) ಯಲ್ಲಿ ಭೀಕರ ಅಪಘಾತವಾಗಿ (Road Accident) 15 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಕಸ ತುಂಬುವ ಟ್ರಕ್​ವೊಂದರ ಬ್ರೇಕ್​ ಫೇಲ್​ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಟ್ರಕ್​ ಹೋಗಿ ಹಲವು ಕಾರು, ಜೀಪ್​, ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ (Truck Accident). ಟ್ರಕ್​ ಡಿಕ್ಕಿಯಾದ ರಭಸಕ್ಕೆ ಆ ವಾಹನಗಳೆಲ್ಲ ನುಜ್ಜುಗುಜ್ಜಾಗಿವೆ. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾರೆ. ಶಿರಪುರ ತಾಲೂಕಿನ, ಮಧ್ಯಪ್ರದೇಶದ ಗಡಿಭಾಗದಲ್ಲಿರುವ ಫಲಸ್​ನೇರ್​ ಎಂಬ ಹಳ್ಳಿ ಬಳಿ ಈ ಭೀಕರ ಅಪಘಾತ ಆಗಿದೆ. ಐದಾರು ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿ ಧುಲೆ ಎಸ್​ಪಿ ಸಂಜಯ್​ ಬರ್ಕುಂಡ್ ಮಾಹಿತಿ ನೀಡಿದ್ದಾರೆ.

‘ಈ ಡಂಪರ್​ ಟ್ರಕ್​ (ಕಸದ ಲಾರಿ) ಮುಂಬಯಿಯತ್ತ ಪ್ರಯಾಣ ಮಾಡುತ್ತಿತ್ತು. ಆದರೆ ಹೈವೇ ಮಧ್ಯೆ ಬ್ರೇಕ್ ಫೇಲ್ ಆಗಿದೆ. ಇದರಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಟ್ರಕ್​ ಒಂದೇ ಸಮನೆ ಹಲವು ವಾಹನಗಳನ್ನು ರಭಸದಿಂದ ಗುದ್ದಿಕೊಂಡು ಹೋಗಿ, ಅಲ್ಲಿಯೇ ಒಂದು ಬಸ್​ ಸ್ಟಾಪ್​ಗೆ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದವರಿಗೂ ಡಿಕ್ಕಿಯಾಗಿದೆ‘ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Road Accident : ಮೂರು ಕಡೆ ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು, ಹಲವರು ಗಂಭೀರ

ಇತ್ತೀಚೆಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ರಾಜ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್​ವೊಂದು ಬೆಂಕಿಗೆ ಆಹುತಿಯಾಗಿ 26ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಈ ಬಸ್​ ನಾಗ್ಪುರದಿಂದ ಪುಣೆಗೆ ಹೋಗುತ್ತಿತ್ತು. 33 ಪ್ರಯಾಣಿಕರು ಇದ್ದರು. ತಡರಾತ್ರಿ 1.30ರ ಹೊತ್ತಿಗೆ ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version