Site icon Vistara News

Road Accident: ಆಟೋ ರಿಕ್ಷಾ,ಪಿಕಪ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ

accident

ಮುಂಬಯಿ: ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ವೇಗವಾಗಿ ಬಂದ ಪಿಕಪ್ ವಾಹನವೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಅಪಘಾತ ಭಾನುವಾರ ತಡ ರಾತ್ರಿ 11.30ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಕಲ್ಯಾಣ್-ಅಹ್ಮದ್‌ನಗರ ರಸ್ತೆಯಲ್ಲಿನ ಓತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹ್ಮದ್‌ನಗರದಿಂದ ಕಲ್ಯಾಣ್ (ಥಾಣೆ ಜಿಲ್ಲೆ) ಕಡೆಗೆ ಹೋಗುತ್ತಿದ್ದ ಪಿಕ್‌ಅಪ್ ವಾಹನವು ಪಿಂಪಲ್‌ಗಾಂವ್ ಜೋಗಾದ ಪೆಟ್ರೋಲ್ ಪಂಪ್ ಬಳಿ ಎದುರು ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ರಿಕ್ಷಾದಲ್ಲಿದ್ದ 7 ಮಂದಿ ಮತ್ತು ಪಿಕಪ್​ ಸವಾರ ಸೇರಿ ಒಟ್ಟು 8 ಮಂದಿ ಸಾವನ್ನಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಟ್‌ ಆ್ಯಂಡ್‌ ರನ್‌, ಬೈಕ್‌ ಡಿಕ್ಕಿ: ಇಬ್ಬರು ಸಾವು

ಬೆಂಗಳೂರು: ರಾಜಧಾನಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ (Road Accident) ಪ್ರಕರಣಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ.

ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸಾವಿಗೀಡಾಗಿದ್ದಾರೆ. ರಿಂಗ್ ರೋಡ್ ನಮ್ಮೂರ ತಿಂಡಿ ಹೋಟೆಲ್ ಬಳಿ ರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ರಾಜರಾಜೇಶ್ವರಿನಗರ ಶ್ರೇಯಸ್ (23) ಸಾವನ್ನಪ್ಪಿದ ಬೈಕ್ ಸವಾರ. ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಸ್, ರಾತ್ರಿ ವಿದ್ಯಾರಣ್ಯಪುರದಲ್ಲಿ‌ ಸ್ನೇಹಿತನನ್ನು ಭೇಟಿ ಮಾಡಿ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ಮೈಸೂರು ರಸ್ತೆ ಟೋಲ್ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ ಸಂಭವಿಸಿದ್ದು, ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಮೃತ ಮಹಿಳೆಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಸಿಸಿಟಿವಿಗಳ ಪರಿಶೀಲನೆ ಮಾಡಿ ಅಪಘಾತ ಮಾಡಿ ಎಸ್ಕೇಪ್ ಆಗಿರುವ ವಾಹನ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ Road Accident : ಭೀಕರ ಅಪಘಾತದಲ್ಲಿ ಬಸ್‌ ಛಿದ್ರ; ಡಾ.ರಾಜಕುಮಾರ್‌ ಫೋಟೊ ಮಾತ್ರ ಭದ್ರ!

ಬಿಎಂಟಿಸಿ ಮೈಮೇಲೆ ಹರಿದು ಮಹಿಳೆ ಸಾವು

ಬೆಂಗಳೂರು: ಬಿಎಂಟಿಸಿಗೆ (Killer BMTC) ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೀಮಾ (21) ಮೃತ ದುರ್ದೈವಿ.

ನಿನ್ನೆ ಸಂಜೆ (ಡಿ.13) ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಸೀಮಾ ಹಾಗೂ ಗುರುಮೂರ್ತಿ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರುಳುತ್ತಿದ್ದರು. ಈ ವೇಳೆ ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಗುದ್ದಿದ್ದರಿಂದ ಆಯಾತಪ್ಪಿ ಸವಾರರು ಕೆಳಗೆ ಬಿದ್ದಿದ್ದರು.

ಈ ವೇಳೆ ಬಸ್‌ನ ಹಿಂಬದಿ ಚಕ್ರ ಹರಿದು ಸೀಮಾ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಎರಡು ವರ್ಷದ ಮಗು ಗಾನವಿ ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್‌ಮೆನ್ ಆಗಿ‌‌ ಕೆಲಸ ನಿರ್ವಹಿಸುತ್ತಿದ್ದಾರೆ.

ಮೂಲತಃ ವಿಜಯನಗರ ಜಿಲ್ಲೆಯ ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಯಾಗಿದ್ದಾರೆ. ಉದ್ಯೋಗ ನಿಮಿತ್ತ ಈ ದಂಪತಿ ಬೆಂಗಳೂರಿಗೆ ಬಂದು‌ ನೆಲೆಸಿದ್ದರು. ಸದ್ಯ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಲಾಗುತ್ತದೆ.

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದ ಬಳಿಕ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version