ನವದೆಹಲಿ: ಅಭಿವೃದ್ಧಿ ಭಾರತ ನಿರ್ಮಾಣಕ್ಕೆ ಯುವಶಕ್ತಿ ದೊಡ್ಡ ಕೊಡುಗೆ ನೀಡಲಿದೆ. ಅವರೇ ಅಭಿವೃದ್ಧಿ ಭಾರತದ ನಿರ್ಮಾತೃಗಳಾಗಲಿದ್ದಾರೆ. ಅವರಿಗಾಗಿ, ಕಳೆದ ಎಂಟು ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಳನ್ನು (Rojgar Mela) ಸೃಷ್ಟಿಸಲಾಗುತ್ತಿದೆ. ಅದರ ಭಾಗವಾಗಿಯೇ ಈಗ ರೋಜ್‌ಗಾರ್ ಮೇಳಕ್ಕೆ ಚಾಲನೆ ನೀಡಲಾಗಿದೆ. ಈಗ ಯಾರಿಗೆ ನೇಮಕಾತಿ ಪತ್ರ ದೊರೆತಿದೆಯೋ ಅವರೆಲ್ಲರೂ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಸಂಗತಿಯನ್ನು ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಉದ್ಯೋಗ ನೇಮಕಾತಿಯ ಸಲುವಾಗಿ ರೋಜ್‌ಗಾರ ಮೇಳವನ್ನು ಆಯೋಜಿಸುತ್ತಿದೆ. ಈ ಪೈಕಿ ಈಗ 75 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ, ಮಾತನಾಡಿದರು.
ಇಂದು ಇಡೀ ಜಗತ್ತೇ ಆರ್ಥಿಕ ಸಂಕಟದಿಂದ ಬಳಲುತ್ತಿದೆ. ಆದರೆ, ಭಾರತ ಮಾತ್ರ ಆರ್ಥಿಕವಾಗಿ ಸದೃಢವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಆರ್ಥಿಕ ಬಲವರ್ಧನೆಗೆ ಏನೆಲ್ಲ ಬೇಕೋ ಅದೆನ್ನೆಲ್ಲ ಮಾಡಿದ್ದೇವೆ. ಹಾಗಾಗಿಯೇ ನಾವು ಜಗತ್ತಿನ ಆರ್ಥಿಕ ಸಂಕಟದಿಂದ ನಮಗೆ ಹೆಚ್ಚು ಅಪಾಯವಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಕಳೆದ ಎಂಟು ವರ್ಷದಲ್ಲಿ ಉದ್ಯೋಗ ಸೃಷ್ಟಿಸುವ ವಲಯಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದೇವೆ. ಅದರ ಪರಿಣಾಮವನ್ನು ತಾವು ಕಾಣಬಹುದು. ಈ ಉದ್ದೇಶಕ್ಕಾಗಿ ನಾವು ಸ್ಕಿಲ್ ಇಂಡಿಯಾ ಆರಂಭಿಸಿದೆವು. ದೇಶಪೂರ್ತಿ ಕೌಶಲ ಕೇಂದ್ರಗಳನ್ನು ತೆರೆದಿದ್ದೇವೆ. ಇದರಿಂದ ಕೋಟ್ಯಂತರ ಯುವಕರಿಗೆ ಲಾಭವಾಗಿದೆ. ಜತೆಗೇ, ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
20 ಲಕ್ಷ ಕೋಟಿ ರೂ. ಸಾಲ
ದೇಶದಲ್ಲಿ ಉದ್ಯೋಗ ಮತ್ತು ಸ್ವಉದ್ಯೋಗಕ್ಕೆ ಅಡ್ಡಿಯಾಗಿದ್ದೇ ಬ್ಯಾಂಕಿಂಗ್ ವ್ಯವಸ್ಥೆ. ಹಾಗಾಗಿ ನಮ್ಮ ಸರ್ಕಾರವು ಎಲ್ಲರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡಿದೆ. ವಿಶೇಷವಾಗಿ ಮುದ್ರಾ ಯೋಜನೆ ಮೂಲಕ ಸ್ವಉದ್ಯೋಗಕ್ಕೆ ಹೆಚ್ಚಿನ ಆರ್ಥಿಕ ನೆರವು ಒದಗಿಸಿದೆ. ಈವರೆಗೆ ಮುದ್ರಾ ಯೋಜನೆಯ ಮೂಲಕ ಸರ್ಕಾರವು 20 ಲಕ್ಷ ಕೋಟಿ ಸಾಲ ನೀಡಿದೆ. ಈ ಸಾಲ ಪಡೆದವರ ಪೈಕಿ ಏಳುವರೆ ಕೋಟಿ ಯುವಕರು ಮೊದಲ ಬಾರಿಗೆ ತಮ್ಮ ವ್ಯಾಪಾರ, ಉದ್ಯಮವನ್ನು ಸ್ಥಾಪಿಸಿಕೊಂಡಿದ್ದಾರೆ. ಈ ಯೋಜನೆ ಲಾಭಪಡೆದವರ ಪೈಕಿ ಶೇ.70ರಷ್ಟು ಮಹಿಳೆಯರಿದ್ದಾರೆಂಬುದು ಗಮನಾರ್ಹ ಎಂದು ಅವರು ತಿಳಿಸಿದರು.
ಸ್ವಸಹಾಯ ಸಂಘ
ಭಾರತದಲ್ಲಿ ಸ್ವ ಸಹಾಯ ಗುಂಪುಗಳು ದೊಡ್ಡ ಪ್ರಮಾಣದಲ್ಲಿ ಪರಿಣಾಮವನ್ನುಂಟು ಮಾಡುತ್ತಿವೆ. ಒಟ್ಟು 8 ಕೋಟಿ ಮಹಿಳೆಯರು ಈ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಮಾರಾಟ ಮಾಡುವ ವ್ಯವಸ್ಥೆಯನ್ನು ನಾವು ಸೃಷ್ಟಿಸಿದ್ದೇವೆ. ಆ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಅವರು ತಿಳಿಸಿದರು.
ಎಂಎಸ್ಎಂಇ ಸೆಕ್ಟರ್
ಭಾರತದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ(ಎಂಎಸ್ಎಂಇ) ವಲಯವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಒದಗಿಸುತ್ತದೆ. ಕೊರೊನಾ ಸಮಯದಲ್ಲಿ ಈ ಕ್ಷೇತ್ರವು ತತ್ತರಿಸಿದಂತೆ ನೋಡಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರವು ಮಾಡಿತು. ಅದಕ್ಕಾಗಿ 3 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಈ ವಲಯ 1.5 ಕೋಟಿ ಉದ್ಯೋಗಳನ್ನು ಸೃಷ್ಟಿಸಿದೆ. ಮನ್ರೇಗಾ ಮೂಲಕವು 7 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ರಫ್ತು ರಾಷ್ಟ್ರವಾಗುತ್ತಿರುವ ಭಾರತ
ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದೆ. 5ಜಿ ಸೇವೆಯಿಂದ ಈ ಕ್ಷೇತ್ರದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಭಾರತವು ಈಗ ಆಮದು ರಾಷ್ಟ್ರದಿಂದ ರಫ್ತು ರಾಷ್ಟ್ರವಾಗಿ ಬದಲಾಗುತ್ತಿದೆ. ಇದಕ್ಕೆ ಮೇಕ್ ಇನ್ ಇಂಡಿಯಾ ನೀತಿ ಹೆಚ್ಚು ಬಲವನ್ನು ತಂದು ಕೊಟ್ಟಿದೆ. ನಮ್ಮ ಸರ್ಕಾರದ ನೀತಿಗಳಿಂದಾಗಿ ಈಗ ದೇಶವು ಹಲವು ಕ್ಷೇತ್ರಗಳಲ್ಲಿ ಗ್ಲೋಬಲ್ ಹಬ್‌ಗಳಾಗಿ ಬದಲಾಗುತ್ತಿದೆ ಎಂದ ಮೋದಿ ಇದಕ್ಕೆ ಸ್ಮಾರ್ಟ್‌ಫೋನ್ ಉತ್ಪಾದನೆ ಮತ್ತು ರಫ್ತು ಉದಾಹರಣೆಯನ್ನಾಗಿ ನೀಡಿದರು.
ಇದನ್ನೂ ಓದಿ | Rozgar Mela | 10 ಲಕ್ಷ ಉದ್ಯೋಗ ನೇಮಕಾತಿ ಅಭಿಯಾನ ರೋಜ್‌ಗಾರ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ