Site icon Vistara News

Ram Mandir: ಸೋರುತಿಹುದು ಅಯೋಧ್ಯೆ ರಾಮಮಂದಿರ ಮಾಳಿಗೆ; ದೇಗುಲದ ಮುಖ್ಯ ಅರ್ಚಕರ ಆತಂಕ

Ram Mandir

Roof of Ram Mandir in Ayodhya leaks during rainfall, chief priest urges attention

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ ರಾಮಮಂದಿರಕ್ಕೆ (Ram Mandir) ಚಾಲನೆ ನೀಡಿ ಆರು ತಿಂಗಳಾಗಿದೆ. 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ರಾಮಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈಗಲೂ ಭೇಟಿ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ, ಮಳೆ ಬಂದಾಗ ರಾಮಮಂದಿರದ ಚಾವಣಿ ಸೋರುತ್ತಿದೆ ಎಂಬುದಾಗಿ ದೇವಾಲಯದ ಮುಖ್ಯ ಅರ್ಚಕರೇ ಮಾಹಿತಿ ನೀಡಿದ್ದಾರೆ.

ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಅವರು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದ್ದಾರೆ. “ಮೊದಲ ಮಳೆಗೇ ಗರ್ಭಗುಡಿಯ ಚಾವಣಿ ಮೂಲಕ ನೀರು ಒಳಗೆ ಬಂದಿದೆ. ನೂರಾರು ಎಂಜಿನಿಯರ್‌ಗಳು ಇಲ್ಲಿದ್ದಾರೆ. ಸುಸಜ್ಜಿತವಾಗಿಯೇ ರಾಮಮಂದಿರ ನಿರ್ಮಿಸಲಾಗಿದೆ. ಹೀಗಿದ್ದರೂ ಗರ್ಭಗುಡಿಯೇ ಸೋರುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೂಡಲೇ ರಾಮಮಂದಿರ ಕಡೆ ಗಮನ ಹರಿಸಿ, ಸಮಸ್ಯೆಯನ್ನು ಸರಿಪಡಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

“ರಾಮಮಂದಿರದ ಗರ್ಭಗುಡಿಯ ಒಳಚಾವಣಿ ಸೋರಿಕೆಯಾಗುತ್ತಿರುವುದು ನಮಗೆಲ್ಲ ಆತಂಕ ತಂದಿದೆ. ಹಾಗೊಂದು ವೇಳೆ ನಿರಂತರವಾಗಿ ಮಳೆ ಬಂದರೆ, ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು, ಪೂಜೆ ಮಾಡಲು ಕೂಡ ಸಮಸ್ಯೆಯಾಗುತ್ತದೆ. ರಾಮಮಂದಿರಕ್ಕೆ ಬರುವ ಭಕ್ತರಿಗೂ ಇದರಿಂದ ಮುಜುಗರ ಆಗುತ್ತದೆ. ಕೂಡಲೇ ಚಾವಣಿಯನ್ನು ದುರಸ್ತಿ ಮಾಡಬೇಕು. ಇದರ ಕುರಿತು ಇನ್ನಷ್ಟು ಗಮನ ಹರಿಸಬೇಕು” ಎಂಬುದಾಗಿ ಸತ್ಯೇಂದ್ರ ದಾಸ್‌ ಅವರು ಒತ್ತಾಯಿಸಿದ್ದಾರೆ.

ಶ್ರೀ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಕೂಡ ನೀರು ಒಳಗೆ ಬರುತ್ತಿರುವುದನ್ನು ದೃಢಪಡಿಸಿದ್ದಾರೆ. “ನಾನು ಅಯೋಧ್ಯೆಯಲ್ಲಿ ಇದ್ದೇನೆ. ಮೊದಲ ಮಹಡಿಯಿಂದ ಮಳೆ ನೀರು ಸೋರಿಕೆಯಾಗುತ್ತಿರುವುದನ್ನುನೋಡಿದ್ದೇನೆ. ಎರಡನೇ ಮಹಡಿಯ ಗುರು ಮಂಟಪ ತೆಗೆದ ಕಾರಣ ನೀರು ಒಳಗೆ ಬರುತ್ತಿದೆ ಎಂದು ಎನಿಸುತ್ತಿದೆ. ಎರಡನೇ ಮಹಡಿಯನ್ನು ಸಂಪೂರ್ಣವಾಗಿ ನಿರ್ಮಿಸಿದ ಬಳಿಕ ಸಮಸ್ಯೆ ಬಗೆಹರಿಯುತ್ತದೆ ಎಂದು ಅನಿಸುತ್ತಿದೆ. ಇದರ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.

ಪರಿಣತ ಎಂಜಿನಿಯರ್‌ಗಳು, ತಜ್ಞರು ಸೇರಿ ರಾಮಮಂದಿರವನ್ನು ನಿರ್ಮಿಸಿದ್ದಾರೆ. ತೀವ್ರ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದರೂ ಮಂದಿರಕ್ಕೆ ಧಕ್ಕೆಯಾಗದ ಹಾಗೆ ನಿರ್ಮಿಸಲಾಗಿದೆ. ಹೀಗಿದ್ದರೂ ರಾಮಮಂದಿರವು ಮೊದಲ ಮಳೆಗೇ ಸೋರಿಕೆಯಾಗಿರುವುದು ಅರ್ಚಕರ ಆತಂಕಕ್ಕೆ ಕಾರಣವಾಗಿದೆ. ಅವ್ಯವಸ್ಥೆ ಕುರಿತು ರಾಮನ ಭಕ್ತರು ಕೂಡ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್‌

Exit mobile version