ಚೆನ್ನೈ: ತಮಿಳುನಾಡಿನಲ್ಲಿ ಬುಡಕಟ್ಟು ಸಮುದಾಯದವರಿಗೆ (Narikuravar Community) ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ನಿರಾಕರಿಸಿದ್ದು, ಪ್ರಕರಣದ ಕುರಿತು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಜನಾಂಗಕ್ಕೆ ಸೇರಿದ ನರಿಕುರವರ್ ಸಮುದಾಯದವರು ಚೆನ್ನೈನಲ್ಲಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಎಂಬ ಮಲ್ಟಿಪ್ಲೆಕ್ಸ್‌ಗೆ ತೆರಳಿದ್ದು, ಇದೇ ವೇಳೆ ಮಲ್ಟಿಪ್ಲೆಕ್ಸ್ ಸಿಬ್ಬಂದಿಯು ಅವರನ್ನು ತಡೆದಿದ್ದಾರೆ. ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರನ್ನು ಸಿನಿಮಾ ಹಾಲ್‌ಗೆ ಬಿಡದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಟ ಸಿಲಂಬರಸನ್ (ಸಿಂಬು) ಅಭಿನಯದ ಪಾಠು ತಾಲಾ ಎಂಬ ಸಿನಿಮಾ ವೀಕ್ಷಿಸಲು ಮಲ್ಟಿಪ್ಲೆಕ್ಸ್‌ಗೆ ನರಿಕುರವರ್ ಸಮುದಾಯದವರು ತೆರಳಿದ್ದರು. ಆದರೆ, ಸಮುದಾಯದವರನ್ನು ಮಲ್ಟಿಪ್ಲೆಕ್ಸ್ ಸಿಬ್ಬಂದಿಯು ತಡೆದಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಅಲ್ಲದೆ, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ ಕಾರಣಕ್ಕಾಗಿಯೇ ಮಲ್ಟಿಪ್ಲೆಕ್ಸ್ ಸಿಬ್ಬಂದಿಯು ಅವರನ್ನು ಒಳಗೆ ಬಿಟ್ಟಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ವಾದ-ಪ್ರತಿವಾದದ ಬಳಿಕವೇ ಬುಡಕಟ್ಟು ಸಮುದಾಯದವರನ್ನು ಸಿನಿಮಾ ವೀಕ್ಷಿಸಲು ಬಿಡಲಾಗಿದೆ ಎಂದು ತಿಳಿದುಬಂದಿದೆ.
ಸಿಬ್ಬಂದಿ ತಡೆದ ವಿಡಿಯೊ ಇಲ್ಲಿದೆ
ಬುಡಕಟ್ಟು ಸಮುದಾಯದವರು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ್ದಾರೆ. ಆದರೂ, ಮಲ್ಟಿಪ್ಲೆಕ್ಸ್ ಒಳಗೆ ಪ್ರವೇಶಿಸಲು ಮುಂದಾದಾಗ ಸಿಬ್ಬಂದಿಯು ತಡೆದಿದ್ದಾರೆ. ಅಲೆಮಾರಿ ಜನಾಂಗದವರು ಟಿಕೆಟ್ ತೋರಿಸಿದರೂ, ದುಡ್ಡು ಕೊಟ್ಟಿದ್ದಾಗಿ ಹೇಳಿದರೂ, ಸಿಬ್ಬಂದಿ ಮಾತ್ರ ಸಿನಿಮಾ ಹಾಲ್‌ಗೆ ಬಿಟ್ಟಿಲ್ಲ. ಈ ವಿಡಿಯೊ ವೈರಲ್ ಆಗುತ್ತಲೇ ಜನ ಹಲವು ರೀತಿಯಾಗಿ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ, ಅಲೆಮಾರಿ ಜನಾಂಗದವರನ್ನು ಸಿನಿಮಾ ಹಾಲ್‌ಗೆ ಬಿಡದೆ ಇರುವುದು ಅಮಾನವೀಯ ಘಟನೆಯಾಗಿದೆ. ಇದನ್ನು ಎಲ್ಲರೂ ಖಂಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಹೇಳುವುದೇನು?
ಪರಿಸ್ಥಿತಿಗೆ ತಕ್ಕ ಹಾಗೆ ಮಲ್ಟಿಪ್ಲೆಕ್ಸ್ ಸಿಬ್ಬಂದಿ ವರ್ತನೆ ಮಾಡಿದೆಯೇ ಹೊರತು, ಬೇರಾವ ಉದ್ದೇಶದಿಂದಲೂ ಸಿನಿಮಾ ವೀಕ್ಷಿಸಲು ಬಂದವರನ್ನು ತಡೆದಿಲ್ಲ ಎಂದು ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಬಳಿಕ ಸ್ಪಷ್ಟನೆ ನೀಡಿದೆ. “ಪಾಠು ತಾಲಾ ಸಿನಿಮಾಗೆ ಸೆನ್ಸಾರ್ ಮಂಡಳಿಯು U/A ಸರ್ಟಿಫಿಕೇಟ್ ನೀಡಿದೆ. ನಿಯಮಗಳ ಪ್ರಕಾರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಸಿನಿಮಾ ವೀಕ್ಷಿಸಲು ಬಿಡುವಂತಿಲ್ಲ. ಸಿನಿಮಾ ವೀಕ್ಷಿಸಲು ಬಂದವರಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನವರು ಇದ್ದರು. ಹಾಗಾಗಿಯೇ ನಮ್ಮ ಸಿಬ್ಬಂದಿಯು ಅವರನ್ನು ತಡೆದಿದ್ದಾರೆ” ಎಂದು ಸ್ಪಷ್ಟನೆ ನೀಡಿದೆ.
ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸ್ಪಷ್ಟನೆ, ಸಿನಿಮಾ ವೀಕ್ಷಿಸಿದ ವಿಡಿಯೊ
“ಸಿನಿಮಾ ವೀಕ್ಷಿಸಲು ಬಂದವರ ಜತೆಗೆ 2, 6, 8 ಹಾಗೂ 10 ವರ್ಷದವರು ಕೂಡ ಇದ್ದರು. ಹಾಗಾಗಿಯೇ ನಮ್ಮ ಸಿಬ್ಬಂದಿಯು ಅವರನ್ನು ತಡೆದಿದ್ದಾರೆ. ಆದರೆ, ಕುಟುಂಬಸ್ಥರು ಸರಿಯಾದ ಸಮಯಕ್ಕೆ ಸಿನಿಮಾ ವೀಕ್ಷಿಸಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ. ಹಾಗೆಯೇ, ಬುಡಕಟ್ಟು ಸಮುದಾಯದವರು ಸಿನಿಮಾ ಹಾಲ್‌ನಲ್ಲಿ ಕುಳಿತು ಚಲನಚಿತ್ರ ನೋಡಿದ ವಿಡಿಯೊವನ್ನು ಕೂಡ ಶೇರ್ ಮಾಡಿದೆ.
ಇದನ್ನೂ ಓದಿ: ವಿನಯ ಸಾಮರಸ್ಯ | ಅಸ್ಪೃಶ್ಯತೆ ನಿವಾರಣೆಗೆ ಬೃಹತ್ ಸಮಾವೇಶದ ಮೂಲಕ ಚಾಲನೆ; ಪರಿಶಿಷ್ಟೇತರರೇ ಟಾರ್ಗೆಟ್