ತಿರುವನಂತಪುರಂ: ದೇಶಾದ್ಯಂತ ರಂಜಾನ್ ಉಪವಾಸ (Ramzan Fast) ಆರಂಭವಾಗಿದೆ. ಮುಸ್ಲಿಮರು ನಿತ್ಯ ಉಪವಾಸ ಮಾಡುತ್ತಿದ್ದರು. ಇದರ ಬೆನ್ನಲ್ಲೇ, ಕೇರಳದ ಪುರಸಭೆಯೊಂದರಲ್ಲಿ ನಿತ್ಯ ಮುಸ್ಲಿಮರಿಗಾಗಿ ಸೈರನ್ ಮೊಳಗಿಸುವಂತೆ ಆದೇಶಿಸಲಾಗಿದ್ದು, ಹಿಂದುಗಳು, ಹಿಂದು ಸಂಘಟನೆಗಳು ಹಾಗೂ ಕ್ರೈಸ್ತ ಸಂಘಟನೆಗಳು ಪುರಸಭೆಯ ಆದೇಶಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿವೆ.
ಕೇರಳದ ಕೊಟ್ಟಾಯಂ ಜಿಲ್ಲೆ ಚೆಂಗನಸೆರ‍್ರಿ ಪುರಸಣೆಯಲ್ಲಿ ಪ್ರತಿದಿನ ಸಂಜೆ 6.39ಕ್ಕೆ ಸೈರನ್ ಮೊಳಗಿಸಲು ಆರಂಭಿಸಲಾಗಿದೆ. ರಂಜಾನ್ ಮುಗಿಯುವ ಏಪ್ರಿಲ್ 21ರವರೆಗೆ ಪ್ರತಿದಿನ ಸಂಜೆ ಸೈರನ್ ಮೊಳಗಿಸಲು ವ್ಯಕ್ತಿಯೊಬ್ಬರನ್ನು ನೇಮಿಸಲಾಗಿದೆ. ನಿತ್ಯ ಪುರಸಭೆಯಲ್ಲಿರುವ ಮುಸ್ಲಿಂ ಸದಸ್ಯರು ಉಪವಾಸ ಅಂತ್ಯಗೊಳಿಸುವಂತೆ ಎಚ್ಚರಿಸಲು ಸೈರನ್ ಮೊಳಗಿಸುವಂತೆ ಆದೇಶಿಸಲಾಗಿದೆ.
ಹೈಕೋರ್ಟ್ ಮೊರೆ
ಪುರಸಭೆಯಲ್ಲಿ ಸೈರನ್ ಮೊಳಗಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಪುರಸಭೆ ಹಿಂದು ಸದಸ್ಯರು, ಹಿಂದು ಐಕ್ಯ ವೇದಿ, ವಿಶ್ವ ಹಿಂದು ಪರಿಷತ್ ಸದಸ್ಯರು ಹಾಗೂ ಕ್ರಿಶ್ಚಿಯನ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿವೆ. ಹಾಗೆಯೇ, ಪುರಸಭೆ ಆದೇಶ ರದ್ದುಗೊಳಿಸಬೇಕು ಎಂದು ಹಿಂದು ಐಕ್ಯ ವೇದಿ ಹಾಗೂ ಕ್ರಿಶ್ಚಿಯನ್ ಅಸೋಸಿಯೇನ್ ಸಂಸ್ಥೆಗಳು ಪ್ರತ್ಯೇಕವಾಗಿ ಕೇರಳ ಹೈಕೋರ್ಟ್ ಮೊರೆ ಹೋಗಿವೆ.
ಪುರಸಭೆಯಲ್ಲಿ ಬಿಜೆಪಿ ಸೇರಿ ಯಾವುದೇ ಪಕ್ಷದ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸದೆ ಸೈರನ್ ಮೊಳಗಿಸುವ ಕುರಿತು ಆದೇಶ ಹೊರಡಿಸಲಾಗಿದೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ಹಾಗೆಯೇ, ಹಿಂದು ಐಕ್ಯ ವೇದಿ ಹಾಗೂ ವಿಶ್ವ ಹಿಂದು ಪರಿಷತ್ ಸದಸ್ಯರು ಪುರಸಭೆ ಎದುರು ಪ್ರತಿಭಟನೆ ನಡೆಸುವ ಮೂಲಕ ಪುರಸಭೆ ಆದೇಶವನ್ನು ಖಂಡಿಸಿದ್ದಾರೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಕಚೇರಿಯಲ್ಲಿ ಧಾರ್ಮಿಕ ಆಚರಣೆಗೆ ಆದೇಶ ನೀಡಿರುವುದಕ್ಕೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಚೆಂಗನಸೆರ‍್ರಿಯಲ್ಲಿರುವ ಮಸೀದಿಯೊಂದರ ಮನವಿ ಮೇರೆಗೆ ಪುರಸಭೆ ಇಂತಹ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ. ಆದಾಗ್ಯೂ, ಪ್ರಕರಣದ ಕುರಿತು ಪುರಸಭೆ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದು, ಪ್ರತಿ ವರ್ಷ ರಂಜಾನ್ ವೇಳೆ ಪುರಸಭೆಯಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಇದು ಕಳೆದ 60 ವರ್ಷದಿಂದ ಪಾಲಿಸಿಕೊಂಡು ಬಂದಿರುವ ರೂಢಿ ಎಂದಿದ್ದಾರೆ.
ಇದನ್ನೂ ಓದಿ: Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?