ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ರೋಜಗಾರ್ ಮೇಳದ (Rozgar Mela) ಭಾಗವಾಗಿ 71 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು. ಆನ್ಲೈನ್ ಮೂಲಕ ಈ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು 71 ಸಾವಿರಕ್ಕೂ ಅಧಿಕ ಜನರಿಗೆ 45 ನಗರಗಳಲ್ಲಿ ಉದ್ಯೋಗ ನೇಮಕಾತಿ ಪತ್ರ ನೀಡಲಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಸಂತೋಷವಾಗಲಿದೆ. ಕಳೆದ ತಿಂಗಳವೂ 75 ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ಉದ್ಯೋಗಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಈ ರೋಜಗಾರ್ ಮೇಳವು ತೋರಿಸುತ್ತಿದೆ. ಸೇವಾ ರಫ್ತುವಿನಲ್ಲಿ ಭಾರತವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಅಲ್ಲದೇ, ಭಾರತವು ಜಗತ್ತಿನ ಉತ್ಪಾದನಾ ಕೇಂದ್ರವಾಗಿ ಮಾರ್ಪಡುತ್ತಿದೆ ಎಂದು ಪ್ರಧಾನಿ ಅವರು ಹೇಳಿದರು.
ರೋಜಗಾರ್ ಮೇಳದ ಭಾಗವಾಗಿ ದೇಶದ ವಿವಿಧ 45 ನಗರಗಳಲ್ಲಿ ಈ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪತ್ರ ವಿತರಣೆ ಮಾಡುತ್ತಿಲ್ಲ. ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲೂ ಇದೇ ರೀತಿ 75 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಗಿತ್ತು.
ಕರ್ಮಯೋಗಿ ಪ್ರಾರಂಭ್
ರೋಜಗಾರ್ ಮೇಳದಲ್ಲಿ ನೇಮಕವಾದ ಎಲ್ಲ ಉದ್ಯೋಗಿಗಳಿಗೆ ಕರ್ಮಯೋಗಿ ಪ್ರಾರಂಭ್ (Karmayogi Prarambh) ಮಾಡ್ಯೂಲ್ ಆನ್ಲೈನ್ ಒರಿಯೆಂಟೇಷನ್ ಕೋರ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು. ರೋಜಗಾರ್ ಮೇಳವು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬದ್ಧತೆಯಾಗಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ಕರ್ಮಯೋಗಿ ಪ್ರಾರಂಭವು ಪರಿಚಯಾತ್ಮಕ ಆನ್ಲೈನ್ ಕೋರ್ಸ್ ಆಗಿದೆ. ಈ ಒರಿಯೇಂಟೇಷನ್ ಕೋರ್ಸ್ನಲ್ಲಿ ಸರ್ಕಾರ ನೌಕರರಿಗೆ ವೃತ್ತಿ ಸಂಹಿತೆ, ಕೆಲಸದ ವೇಳೆ ಕೈಗೊಳ್ಳಬೇಕಾದ ಕರ್ತವ್ಯವಗಳು, ಸಂಹಿತೆ, ಮಾನವ ಸಂಪನ್ಮೂಲ ಮಾಹಿತಿಗಳು, ನೌಕರರಿಗೆ ದೊರೆಯುವ ಇತರೆ ಭತ್ಯೆಗಳು, ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಇದನ್ನೂ ಓದಿ | Rozgar Mela | 10 ಲಕ್ಷ ಉದ್ಯೋಗ ನೇಮಕಾತಿ ಅಭಿಯಾನ ರೋಜ್ಗಾರ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ