ವಾಷಿಂಗ್ಟನ್: ಮತ್ತೆರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ರಾಜಮೌಳಿ ನಿರ್ದೇಶನದ RRR ಗೆದ್ದುಕೊಂಡಿದೆ. 28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನ ‘ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರʼ ಹಾಗೂ ʼನಾಟು ನಾಟುʼ ಹಾಡಿಗೆ ʼಅತ್ಯುತ್ತಮ ಮೂಲ ಗೀತೆʼ ಪ್ರಶಸ್ತಿ ದೊರೆತಿವೆ.
ಕಳೆದ ವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನದಲ್ಲಿ ʼನಾಟು…ನಾಟುʼ ಗೀತೆಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಬಂದಿತ್ತು. ಇದೀಗ ಕ್ರಿಟಿಕ್ಸ್ ಚಾಯ್ಸ್‌ನಲ್ಲೂ ಅತ್ಯುತ್ತಮ ಮೂಲ ಗೀತೆ ಪುರಸ್ಕಾರ ಗೆದ್ದುಕೊಂಡಿದೆ. ವಿದೇಶಿ ಭಾಷೆಯ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದೆ.
ಕಳೆದ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು.
ಈ ಸ್ಪರ್ಧೆಯಲ್ಲಿ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಘಟಾನುಘಟಿಗಳ ಚಿತ್ರಗಳ ವಿರುದ್ಧ ‘ಆರ್‌ಆರ್‌ಆರ್’ ಸ್ಪರ್ಧಿಸಿತ್ತು. ಆಸ್ಕರ್ ಪ್ರಶಸ್ತಿಗೆ ಕೂಡ ಇದು ಸ್ಪರ್ಧಾರ್ಹತೆ ಗಳಿಸಿದೆ.
ಇದನ್ನೂ ಓದಿ | RRR Movie | ಆರ್‌ಆರ್‌ಆರ್ ಬಾಲಿವುಡ್ ಸಿನಿಮಾವಲ್ಲ: ನಿರ್ದೇಶಕ ರಾಜಮೌಳಿ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ರಾಜಮೌಳಿ, ‘ನನ್ನ ಜೀವನದಲ್ಲಿ ಬಂದ ಮಹಿಳೆಯರಿಗೆ ಧನ್ಯವಾದ ಹೇಳುತ್ತೇನೆ. ತಾಯಿಯಿಂದ ಪ್ರಾರಂಭಿಸಿ ನನ್ನ ಪತ್ನಿಯವರೆಗೆ ನನ್ನನ್ನು ಪೋಷಿಸಿದ್ದಾರೆ. ತಾಯಿ ನನ್ನನ್ನು ಕಾಮಿಕ್ಸ್ ಬುಕ್ ಓದುವಂತೆ, ಕಥೆ ಪುಸ್ತಕ ಓದುವಂತೆ ಪ್ರೋತ್ಸಾಹಿಸುತ್ತಿದ್ದಳು. ನನ್ನ ಸ್ವಂತಿಕೆಯನ್ನು ಉತ್ತೇಜಿಸುತ್ತಿದ್ದಳು. ನನ್ನ ಪತ್ನಿ ಬಟ್ಟೆ ಡಿಸೈನರ್‌ಗಿಂತ ಹೆಚ್ಚಾಗಿ ನನ್ನ ಜೀವನದ ಡಿಸೈನರ್ʼʼ ಎಂದರು. ಅವರ ಪತ್ನಿ ರಮಾ ರಾಜಮೌಳಿ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
ವಿಮರ್ಶಕರ ಆಯ್ಕೆ ಪ್ರಶಸ್ತಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎಸ್‌ಎಸ್ ರಾಜಮೌಳಿ ಸಮಾರಂಭದಲ್ಲಿ ಪ್ರಶಸ್ತಿಯ ಜತೆ ಇರುವುದನ್ನು ತೋರಿಸಲಾಗಿದೆ. RRR ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಶ್ರಿಯಾ ಶರಣ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ, ಒಲಿವಿಯಾ ಮೋರಿಸ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಸಹ ನಟಿಸಿದ್ದಾರೆ. ಇದು ಭಾರತ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಾಲ್ಪನಿಕ ಸ್ನೇಹ ಮತ್ತು ಬ್ರಿಟಿಷ್ ರಾಜ್ ವಿರುದ್ಧದ ಹೋರಾಟದ ಕತೆಯಾಗಿದೆ.
ಇದನ್ನೂ ಓದಿ | RRR Movie | ಆರ್‌ಆರ್‌ಆರ್‌ಗೆ ಮತ್ತೊಂದು ಜಾಗತಿಕ ಗರಿ, ದಿ ಚೆಲ್ಲೊ ಶೋಗೂ ಇಂಟರ್‌ನ್ಯಾಷನಲ್ ಪ್ರೆಸ್ ಅಕಾಡೆಮಿ ಪುರಸ್ಕಾರ