ಪಾಟ್ನಾ, ಬಿಹಾರ: ಮಹಿಳೆಯರಿಗೆ ಗರ್ಭದಾನ (Impregnating Women) ಮಾಡುವ ಹೆಸರಿನಲ್ಲಿ ಗಂಡಸರಿಗೆ ಭಾರೀ ಮೋಸ ಮಾಡುತ್ತಿದ್ದ ಜಾಲವೊಂದನ್ನು (Bihar Gang) ಬಿಹಾರ ಪೊಲೀಸರು (Bihar Police) ಭೇದಿಸಿದ್ದಾರೆ. ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಸರ್ವೀಸ್ (All India Pregnant Job Service) ಎಂಬ ಹೆಸರಿನಡಿ ಮಹಿಳೆಯರಿಗೆ ಗರ್ಭದಾನ ಮಾಡುವ(ಬಸಿರು ಮಾಡುವುದು) ಪುರುಷರಿಗೆ 13 ಲಕ್ಷ ರೂ. ಆಫರ್‌ನ ಆಮಿಷವೊಡ್ಡಿ ಅವರಿಂದ ಸಾಕಷ್ಟು ಹಣವನ್ನು ಕೀಳಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಬಿಹಾರ ಪೊಲೀಸರು 8 ಜನರ ತಂಡವನ್ನು ಬಂಧಿಸಿದ್ದಾರೆ.
ಆರೋಪಿಗಳು, ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ‘ಗರ್ಭದಾನ’ ಮಾಡಲು ಸಿದ್ಧರಿರುವ ಪುರುಷರನ್ನು ಸಂಪರ್ಕಿಸುತ್ತಿದ್ದರು. ಅವರ ‘ಸೇವೆ’ಗೆ ಪ್ರತಿಯಾಗಿ ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶವನ್ನು ವಿವರಿಸುತ್ತಿದ್ದರು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಆಮಿಷಕ್ಕೆ ಒಳಗಾಗುತ್ತಿದ್ದ ಪುರುಷರು ಅವರು ಹೇಳಿದಂತೆ ಕೇಳುತ್ತಿದ್ದರು. ಅವರಿಂದ ನೋಂದಣಿ ಶುಲ್ಕವಾಗಿ ಮೊದಲಿಗೆ 800 ರೂ. ಪಡೆದುಕೊಳ್ಳುತ್ತಿದ್ದರು. ನೋಂದಣಿಯಾದ ಮೇಲೆ, ಆರೋಪಿಗಳಿಗೆ ಕೆಲವು ಫೋಟೋಗ್ರಾಫ್‌ಗಳನ್ನು ಅವರು ನೀಡುತ್ತಿದ್ದರು ಮತ್ತು ಯಾವ ಮಹಿಳೆಗೆ ಗರ್ಭದಾನ ಮಾಡಲು ಸಿದ್ಧರಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗತ್ತಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಆಮಿಷಕ್ಕೊಳಗಾದ ಪುರುಷರು ಆಯ್ದುಕೊಳ್ಳುವ ಸುಂದರ ಮಹಿಳೆಯರ ಫೋಟೋಗಳಿಗೆ ಅನುಗುಣವಾಗಿ ಅವರಿಂದ 5ರಿಂದ 20 ಸಾವಿರ ರೂಪಾಯಿವರೆಗೆ ಭದ್ರತಾ ಠೇವಣಿಯಾಗಿ ಪಡೆದುಕೊಳ್ಳುತ್ತಿದ್ದರು. ಮಹಿಳೆ ಗರ್ಭಿಣಿಯಾದರೆ 13 ಲಕ್ಷ ರೂ. ನೀಡುವುದಾಗಿ ಪುರುಷರಿಗೆ ತಿಳಿಸಲಾಗಿತ್ತು. ಮಹಿಳೆಯನ್ನು ಗರ್ಭಧರಿಸಲು ವಿಫಲರಾದರೂ 5 ಲಕ್ಷ ರೂ. ಸಾಂತ್ವನದ ಹಣವಾಗಿ ನೀಡಲಾಗುವುದು ಎಂಬ ಭರವಸೆಯನ್ನು ಆರೋಪಿಗಳು ಸಂತ್ರಸ್ತರಿಗೆ ನೀಡುತ್ತಿದ್ದರು ಎಂದು ನಾವಡದ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಆನಂದ್ ತಿಳಿಸಿದ್ದಾರೆ.
ಬಿಹಾರ ಪೊಲೀಸರ ವಿಶೇಷ ತನಿಖಾ ತಂಡ ನವಾಡದಲ್ಲಿ ದಾಳಿ ನಡೆಸಿದ ನಂತರ, ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಆವರಣದಿಂದ ಮೊಬೈಲ್ ಫೋನ್‌ಗಳು ಮತ್ತು ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ, ಮಾಸ್ಟರ್‌ಮೈಂಡ್ ಸೇರಿದಂತೆ ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sperminator: ಈತನಿಂದ ಗರ್ಭ ಧರಿಸಿದ ಹೆಂಗಸರು 180; 200 ಮಕ್ಕಳಿಗೆ ಅಪ್ಪ! ಆದರೂ ಅವಿವಾಹಿತ