ನವದೆಹಲಿ: 2021-22ರ ಸಾಲಿನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ(BJP)ಯ ಆದಾಯದಲ್ಲಿ ಶೇ.154.82ರಷ್ಟು ಏರಿಕೆಯಾಗಿದೆ. ಒಟ್ಟು 1917.12 ಕೋಟಿ ರೂ. ಆದಾಯ ಬಿಜೆಪಿಗೆ ದೊರೆತಿದೆ. ಅಂದರೆ, ಈ ಪೈಕಿ ಶೇ.54ರಷ್ಟು ದೇಣಿಗೆ ವಿವಾದತ್ಮಕ ಎಲೆಕ್ಟ್ರೋಲ್ ಬಾಂಡ್‌ಗಳ (Electoral Bonds) ಮೂಲಕವೇ ಪಕ್ಷದ ಖಜಾನೆಗೆ ಸಂದಿದೆ.
ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಈ ವರದಿಯನ್ನು ಸಿದ್ಧಪಡಿಸಿದೆ. ಭಾರತೀಯ ಚುನಾವಣಾ ಆಯೋಗಕ್ಕೆ ಪಕ್ಷಗಳು ನೀಡಿದ ಮಾಹಿತಿಯನ್ನಾಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.
ಬಿಜೆಪಿಗೆ ಒಟ್ಟು ಎಷ್ಟು ಆದಾಯ ಮತ್ತು ವೆಚ್ಚ?
2021-22ರ ಹಣಕಾಸು ವರ್ಷವದಲ್ಲಿ ಬಿಜೆಪಿಯ ಒಟ್ಟು 1917.12 ಕೋಟಿ ರೂ. ಆದಾಯವನ್ನು ಗಳಿಸಿದೆ. ಈ ಪೈಕಿ ಕೇವಲ 854 ಕೋಟಿ ರೂ.(ಶೇ.44.57) ವೆಚ್ಚ ಮಾಡಿದೆ.
ಕಾಂಗ್ರೆಸ್ ಗಳಿಕೆ ಮತ್ತು ವೆಚ್ಚ ಎಷ್ಟು?
ಮತ್ತೊಂದೆಡೆ, ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಆದಾಯ ಗಳಿಕೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಎರಡನೇ ಸ್ಥಾನದಲ್ಲಿ ತೃಣಮೂಲ ಕಾಂಗ್ರೆಸ್ ಇದೆ. 2021-22ರ ಸಾಲಿನಲ್ಲಿ ಕಾಂಗ್ರೆಸ್‌ಗೆ ಒಟ್ಟು 541 ಕೋಟಿ ರೂ. ಆದಾಯ ಬಂದಿದ್ದು, ಈ ಪೈಕಿ 400 ಕೋಟಿ ರೂ. ವೆಚ್ಚ ಮಾಡಿದೆ. ಅಂದರೆ, ತನ್ನ ಆದಾಯದ ಶೇ.73ರಷ್ಟು ಹಣವನ್ನ ವ್ಯಯಿಸಿದೆ.
ಇನ್ನು ಎರಡನೇ ಸ್ಥಾನದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 545 ಕೋಟಿ ರೂ. ದೇಣಿಗೆ ಹರಿದು ಬಂದಿದ್ದರೆ, ಈ ಪೈಕಿ ಆ ಪಕ್ಷವು ಕೇವಲ 268 ಕೋಟಿ ರೂ. ಮಾತ್ರವೇ ವೆಚ್ಚ ಮಾಡಿದೆ.
ಇದನ್ನೂ ಓದಿ: Corporate Donation | 5 ವರ್ಷದಲ್ಲಿ ಗುಜರಾತ್‌ನಿಂದ ಬಿಜೆಪಿಗೆ 163 ಕೋಟಿ ರೂ. ಕಾರ್ಪೊರೇಟ್ ದೇಣಿಗೆ!
ರಾಜಕೀಯ ಪಕ್ಷಗಳಿಗೆ ಆದಾಯದ ಮೂಲ ಯಾವುದು?
ಬಿಜೆಪಿ, ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ತಮ್ಮ ಒಟ್ಟು ಆದಾಯದ ಪೈಕಿ ಶೇ.55.08ರಷ್ಟು ಆದಾಯವನ್ನು ವಿವಾದಿತ ಎಲೆಕ್ಟ್ರೋಲ್ ಬಾಂಡ್‌ಗಳ ಮೂಲಕವೇ ಪಡೆದುಕೊಂಡಿವೆ. ಈ ಪೈಕಿ ಬಿಜೆಪಿಗೆ ಅತಿ ಹೆಚ್ಚು ಅಂದರೆ, 1033.70 ಕೋಟಿ ರೂ. ಈ ಬಾಂಡ್ ಮೂಲಕ ಬಂದಿದೆ. ಇದೇ ವೇಳೆ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ಗೆ ಕ್ರಮವಾಗಿ 528 ಕೋಟಿ ರೂ. ಹಾಗೂ 236 ಕೋಟಿ ರೂ. ಆದಾಯವು ಬಾಂಡ್‍ಗಳಿಂದ ಬಂದಿದೆ. ಇನ್ನು ಎನ್‌ಸಿಪಿಗೆ 14 ಕೋಟಿ ರೂ. ದೊರೆತಿದೆ.