Site icon Vistara News

ಗೋವಾ ಕಾಂಗ್ರೆಸ್‌ ಶಾಸಕರಿಗೆ ಬಿಗ್‌ ಆಫರ್‌!: ಸಿ.ಟಿ.ರವಿ ಮಾತು ನಿಜವಾಗುವ ಸಮಯ ಬಂದಿದೆಯಾ?

Goa Politics

ಪಣಜಿ: ಈಗಷ್ಟೇ ಮಹಾರಾಷ್ಟ್ರದಲ್ಲಿ ರೆಸಾರ್ಟ್‌ ರಾಜಕಾರಣ ಮುಗಿದು, ಅಂತೂ ಹೊಸದೊಂದು ಸರ್ಕಾರ ರಚನೆಯಾಗಿದೆ. ಅದರ ಬೆನ್ನಲ್ಲೇ ಗೋವಾದಲ್ಲಿ ಬಂಡಾಯ ರಾಜಕಾರಣ ಶುರುವಾಗಿದೆ. ಗೋವಾ ಕಾಂಗ್ರೆಸ್‌ನ ಏಳು ಮಂದಿ ಶಾಸಕರು ಪಕ್ಷದಿಂದ ಹೊರಗೆ ಕಾಲಿಟ್ಟಿದ್ದು, ಅದರಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್‌ ಕಾಮತ್‌ ಸೇರಿ ಆರು ಮಂದಿ ಬಿಜೆಪಿಗೆ ಸೇರುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಗೋವಾ ಕಾಂಗ್ರೆಸ್‌ ಮಾಜಿ ಮುಖ್ಯಸ್ಥ ಗಿರೀಶ್‌ ಚೋಡಂಕರ್‌ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಶಾಸಕರಿಗೆಲ್ಲ ಬಿಜೆಪಿ ಸೇರಲು 40 ಕೋಟಿ ರೂಪಾಯಿ ಆಫರ್‌ ಬಂದಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸೇರಿದರೆ ಹಣ ಕೊಡುವುದಾಗಿ ಕಾಂಗ್ರೆಸ್‌ ಶಾಸಕರಿಗೆ ಗೋವಾದ ಕೆಲವು ಕೈಗಾರಿಕೋದ್ಯಮಿಗಳು ಮತ್ತು ಕಲ್ಲಿದ್ದಲು ಮಾಫಿಯಾಗಳವರು ಕರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಹಲವು ಶಾಸಕರಿಗೆ ಆಫರ್‌ ಬರುತ್ತಿದ್ದು ಅದರಲ್ಲಿ ಕೆಲವರು ಒಪ್ಪಿಕೊಳ್ಳದೆ, ಈ ಬಗ್ಗೆ ಕಾಂಗ್ರೆಸ್‌ ಗೋವಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ. ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನವ್ಡೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಲಾಗಿಲ್ಲ. ಹಣದ ಆಫರ್‌ ಕೂಡ ಇಟ್ಟಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಸುಳ್ಳು ಆರೋಪ ಮಾಡುತ್ತಿದೆ ಎಂದಿದ್ದಾರೆ. ʼಕಾಂಗ್ರೆಸ್‌ನಲ್ಲಿನ ಗೊಂದಲ, ಶಾಸಕರು ಬಂಡಾಯವೆದ್ದಿದ್ದಕ್ಕೂ, ನಮಗೂ ಏನೂ ಸಂಬಂಧವಿಲ್ಲʼ ಎಂದು ತಿಳಿಸಿದ್ದಾರೆ. ಜುಲೈ 11ರಿಂದ ಗೋವಾ ವಿಧಾನಸಭೆಯಲ್ಲಿ ಎರಡು ವಾರಗಳ ಕಾಲ ಬಜೆಟ್‌ ಅಧಿವೇಶನ ನಡೆಯಲಿದೆ. ಅದರ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಭೆ ಇಂದು ನಡೆದಿತ್ತು. ಆದರೆ ಅದರಲ್ಲಿ ಕಾಂಗ್ರೆಸ್‌ನ ಒಟ್ಟಾರೆ 11 ಎಂಎಲ್‌ಎಗಳಲ್ಲಿ, 7 ಶಾಸಕರು ಪಾಲ್ಗೊಂಡಿಲ್ಲ. ಅದರ ಬೆನ್ನಲ್ಲೇ ಬಿಜೆಪಿ ಸೇರ್ಪಡೆ ಗುಮಾನಿ ಎದ್ದಿದೆ.

ಮೇ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಗೋವಾ ರಾಜ್ಯ ಉಸ್ತುವಾರಿ ಸಿಟಿ ರವಿ ಮಾತನಾಡುತ್ತ, ʼಗೋವಾದಲ್ಲಿ ಸದ್ಯ ಬಿಜೆಪಿಯ 20ಶಾಸಕರಿದ್ದಾರೆ. ಆ ಸಂಖ್ಯೆ ಈ ವರ್ಷದ ಕೊನೆಯಲ್ಲಿ 30ಕ್ಕೆ ಏರಲಿದೆʼ ಎಂದು ಹೇಳಿದ್ದರು. ಆ ಮಾತೀಗ ನಿಜವಾಗುವ ಸಮಯ ಬಂದಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ.

ಇದನ್ನೂ ಓದಿ: ಗೋವಾ ಕಾಂಗ್ರೆಸ್‌ನಲ್ಲಿ ಬಂಡಾಯ, ಕೆಲ ಶಾಸಕರು ಬಿಜೆಪಿಯತ್ತ

Exit mobile version