Site icon Vistara News

777 ಕೋಟಿ ರೂ. ವೆಚ್ಚದ ಪ್ರಗತಿ ಮೈದಾನ ಸುರಂಗ 2 ವರ್ಷದಲ್ಲೇ ಹಾಳಾಯ್ತು; ಭಾರಿ ಟೀಕೆ

Pragati Maidan Tunnel

Rs 777 Crore Pragati Maidan Tunnel Beyond Repair, Needs Overhaul: Report

ನವದೆಹಲಿ: ದೇಶದಲ್ಲಿ ಕಳಪೆ ಕಾಮಗಾರಿಗಳು ದೊಡ್ಡ ವಿಷಯವೇ ಅಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಮಾಣವಾಗಿ ವರ್ಷಗಳು ಉರುಳುವುದು ಬಿಡಿ, ನಿರ್ಮಾಣ ಹಂತದಲ್ಲೇ ಸೇತುವೆಗಳು, ಕಟ್ಟಡಗಳು ಕುಸಿದ ಪ್ರಕರಣಗಳು ಸಾಕಷ್ಟಿವೆ. ಇದಕ್ಕೆ ನಿದರ್ಶನ ಎಂಬಂತೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 777 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪ್ರಗತಿ ಮೈದಾನ ಸುರಂಗವು (Pragati Maidan Tunnel) ಉದ್ಘಾಟನೆಗೊಂಡ ಎರಡು ವರ್ಷದಲ್ಲೇ ಭಾರಿ ಪ್ರಮಾಣ ದುರಸ್ತಿ ಮಾಡಬೇಕಾದ ದುಸ್ಥಿತಿಗೆ ಬಂದು ನಿಂತಿದೆ.

ಹೌದು, ಪ್ರಗತಿ ಮೈದಾನ ಸುರಂಗದಲ್ಲಿ ನೀರು ನಿಂತಿರುವ, ರಸ್ತೆ ಹಾಳಾಗಿರುವ, ಸುರಂಗಕ್ಕೆ ಹಾನಿಯಾಗಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸುರಂಗ ಸೋರುತ್ತಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿರುವ ದೃಶ್ಯಗಳು ಕೂಡ ಲಭ್ಯವಾಗಿವೆ. ಮೂಲಗಳ ಪ್ರಕಾರ, ಸುರಂಗವನ್ನು ರಿಪೇರಿ ಮಾಡುವುಲ್ಲ, ಬಹುತೇಕ ಭಾಗವನ್ನು ನೆಲಸಮಗೊಳಿಸಿ, ಮತ್ತೆ ನಿರ್ಮಾಣ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಕಳಪೆ ಕಾಮಗಾರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಲ್‌&ಟಿ ಕಂಪನಿಗೆ ನೋಟಿಸ್‌

ಪ್ರಗತಿ ಮೈದಾನ ಸುರಂಗದ ಅವ್ಯವಸ್ಥೆಯ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ, ಸುರಂಗ ನಿರ್ಮಿಸಿದ ಎಲ್‌&ಟಿ (Larsen And Toubro) ಕಂಪನಿಗೆ ದೆಹಲಿಯ ಪಿಡಬ್ಲ್ಯೂಡಿ ಇಲಾಖೆಯು ನೋಟಿಸ್‌ ಜಾರಿ ಮಾಡಿದೆ. ಕ್ಷಿಪ್ರವಾಗಿ ಸುರಂಗದ ದುರಸ್ತಿ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಕೆಲವು ಕಡೆಯಂತೂ ಸುರಂಗ ಕುಸಿಯುವ ಭೀತಿ ಇರುವುದರಿಂದ ಪ್ರಯಾಣಿಕರು ಭಯದಲ್ಲೇ ಸಂಚರಿಸುವ ದುಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Agnipath: ಒಳ್ಳೆಯ ಉದ್ದೇಶದ ಯೋಜನೆಗಳಿಗೆ ರಾಜಕೀಯ ಬಣ್ಣ ದೇಶದ ದುರದೃಷ್ಟ ಎಂದ ಮೋದಿ

ಸೆಂಟ್ರಲ್‌, ಆಗ್ನೇಯ ಹಾಗೂ ನವದೆಹಲಿಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ಸುಮಾರು 1.3 ಕಿಲೋಮೀಟರ್‌ ಉದ್ದದ ಸುರಂಗ ನಿರ್ಮಿಸಲಾಗಿದೆ. ಭೈರೋನ್‌ ಮಾರ್ಗ, ರಿಂಗ್‌ ರೋಡ್‌ ಹಾಗೂ ಮಥುರಾ ರಸ್ತೆಗೆ ಯಾವುದೇ ಸಿಗ್ನಲ್‌ಗಳ ಕಿರಿಕಿರಿಯಿಲ್ಲದೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ ಸುಮಾರು 777 ಕೋಟಿ ರೂ. ವ್ಯಯಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜೂನ್‌ನಲ್ಲಿ ಸುರಂಗವನ್ನು ಲೋಕಾರ್ಪಣೆ ಮಾಡಿದ್ದರು. “ಇದು ಕೇಂದ್ರ ಸರ್ಕಾರದ ಕೊಡುಗೆ” ಎಂದು ಕೂಡ ಮೋದಿ ಹೇಳಿದ್ದರು. 2023ರಲ್ಲಿ ಭಾರಿ ಮಳೆಯಿಂದಾಗಿ ಸುರಂಗದಲ್ಲಿ ಒಂದು ತಿಂಗಳು ಸಂಚಾರ ರದ್ದುಗೊಳಿಸಲಾಗಿತ್ತು. ಆಗಲೂ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version