Site icon Vistara News

MLAs Salary: ಶಾಸಕರಿಗೆ 84 ಸಾವಿರ ರೂ. ಸಂಬಳ ಸಾಲದು, ಹೆಚ್ಚಿಸಿ ಎಂದ ಪಂಜಾಬ್‌ ಎಂಎಲ್‌ಎ, ವಿಧೇಯಕಕ್ಕೆ ಅಸ್ತು

Bhagwant Mann declines Centre's Z-plus security cover

Punjab CM Bhagwant Mann declines Centre's Z-plus security cover, Says confidence in state police

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಆಮ್‌ ಆದ್ಮಿ ಪಕ್ಷದ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಶಾಸಕರ ವೇತನವನ್ನು (MLAs Salary) ಶೇ.66ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ, ಪಂಜಾಬ್‌ನಲ್ಲೂ ವೇತನ ಹೆಚ್ಚಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. “ಪಂಜಾಬ್‌ ಶಾಸಕರಿಗೆ ಮಾಸಿಕ ನೀಡುವ 84 ಸಾವಿರ ರೂ. ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಹೆಚ್ಚಿಸಬೇಕು” ಎಂದು ವಿಧಾನಸಭೆಯಲ್ಲಿ ಶಿರೋಮಣಿ ಅಕಾಲಿ ದಳ ಶಾಸಕ ಸುಖ್‌ವಿಂದರ್‌ ಕುಮಾರ್‌ ಸುಖಿ ಹೇಳಿದರು. ಇದೇ ವಿಚಾರವನ್ನು ಅನುಮೋದಿಸಿದ ಮುಖ್ಯಮಂತ್ರಿ ಭಗವಂತ್‌ ಮಾನ್‌, “ಸಂಬಳ ಹೆಚ್ಚಳದ ಕುರಿತು ಸಮಿತಿ ರಚಿಸಿ” ಎಂದು ಸ್ಪೀಕರ್‌ಗೆ ಮನವಿ ಮಾಡಿದರು.

ಪಂಜಾಬ್‌ ವಿಧಾನಸಭೆಯಲ್ಲಿ ಮಾತನಾಡಿದ ಅಕಾಲಿದಳ ಶಾಸಕ, “ಶಾಸಕರಿಗೆ ಮಾಸಿಕ ನೀಡುವ 84 ಸಾವಿರ ರೂ. ಯಾವುದಕ್ಕೂ ಸಾಕಾಗುವುದಿಲ್ಲ. ನಮ್ಮ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ರೂ. ನೀಡಬೇಕು. ಪಿಎಗಳಿಗೂ ಸಂಬಳ ಕೊಡಬೇಕು. ಇದೆಲ್ಲದರ ಮಧ್ಯೆ ನಿತ್ಯದ ಖರ್ಚುಗಳನ್ನು ಕೂಡ ತೂಗಿಸಬೇಕು. ಹಾಗಾಗಿ, ವೇತನ ಸಾಕಾಗುತ್ತಿಲ್ಲ. ಶಾಸಕರ ವೇತನ ಜಾಸ್ತಿ ಮಾಡಿದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ. ಇದರಿಂದಾಗಿ ಶಾಸಕರ ವೇತನ ಹೆಚ್ಚಿಸಬೇಖು” ಎಂದು ಹೇಳಿದರು.

ಭಗವಂತ್‌ ಮಾನ್‌ ಅವರು ಕೂಡ ಅಕಾಲಿ ದಳ ಶಾಸಕರ ವಿಚಾರವನ್ನು ಒಪ್ಪಿದರು. ಹಾಗೆಯೇ, ಶಾಸಕರ ವೇತನ ಕುರಿತು ಮಂಡಿಸಿದ ವಿಧೇಯಕಕ್ಕೆ ಅವಿರೋಧವಾಗಿ ಅಂಗೀಕಾರ ದೊರೆತಿದೆ. ಶಾಸಕರ ವೇತನ ಹೆಚ್ಚಿಸುವ ಕುರಿತು ಸಮಿತಿಯೊಂದನ್ನು ರಚಿಸಬೇಕು ಎಂದೂ ಭಗವಂತ್‌ ಮಾನ್‌ ಅವರು ಸ್ಪೀಕರ್‌ಗೆ ಮನವಿ ಮಾಡಿದರು.

ದೆಹಲಿಯಲ್ಲಿ ಶೇ.66ರಷ್ಟು ಹೆಚ್ಚಳ:

ದೆಹಲಿಯಲ್ಲಿ ಇತ್ತೀಚೆಗಷ್ಟೇ ಶಾಸಕರ ವೇತನ ಹೆಚ್ಚಿಸಲಾಗಿತ್ತು. ಇಷ್ಟು ದಿನ ತಿಂಗಳಿಗೆ 54,000 ರೂಪಾಯಿ ವೇತನ ತೆಗೆದುಕೊಳ್ಳುತ್ತಿದ್ದ ಶಾಸಕರು 90 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಶಾಸಕರ ಬೇಸಿಕ್​ ಸಂಬಳ ಇಷ್ಟು ದಿನ 12 ಸಾವಿರ ಇದ್ದಿದ್ದು, 30 ಸಾವಿರಕ್ಕೆ ಹೆಚ್ಚಳವಾಗಿದೆ. ಹಾಗೇ, ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿಯೇ ಅವರಿಗೆ ಅನುಕೂಲವಾಗಲಿದೆ. ಹಾಗೇ, ದೆಹಲಿಯಲ್ಲಿ ಇನ್ಮುಂದೆ ಮುಖ್ಯಮಂತ್ರಿ ವೇತನ ತಿಂಗಳಿಗೆ 1.70 ಲಕ್ಷ ರೂಪಾಯಿ. ಇಷ್ಟು ದಿನ ಅದು ತಿಂಗಳಿಗೆ 72 ಸಾವಿರ ರೂಪಾಯಿ ಇತ್ತು.

ಇದನ್ನೂ ಓದಿ: ಡಬಲ್​ ಆಯ್ತು ದೆಹಲಿ ಶಾಸಕರ ಸಂಬಳ!; 12 ವರ್ಷಗಳ ನಂತರ ಭರ್ಜರಿ ಏರಿಕೆ, ಸಿಎಂ ವೇತನವೆಷ್ಟು ಇನ್ಮುಂದೆ?

ದೆಹಲಿಯಲ್ಲಿ 12 ವರ್ಷಗಳ ನಂತರ ಶಾಸಕರ ವೇತನ ಹೆಚ್ಚಳವಾಗಿದೆ. 2023ರ ಫೆಬ್ರವರಿ 14ರಿಂದ ಅನ್ವಯ ಆಗುವಂತೆ ಈ ಯೋಜನೆ ಜಾರಿಯಾಗಲಿದೆ. ಶಾಸಕರ ವೇತನವನ್ನು ಶೇ. 66.67ರಷ್ಟು ಏರಿಸುವ ಪ್ರಸ್ತಾವನೆಯನ್ನು ದೆಹಲಿ ಶಾಸಕಾಂಗ ಸಭೆಯಲ್ಲಿ ಅನುಮೋದಿಸಿ, ಬಳಿಕ ಕೇಂದ್ರ ಗೃಹ ಇಲಾಖೆಗೆ ಕಳಿಸಲಾಗಿತ್ತು. ದೆಹಲಿ ಒಂದು ರಾಜ್ಯವಲ್ಲ. ಅದೊಂದು ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ, ಈ ಶಾಸಕರ ಸಂಬಳದ ವಿಚಾರವನ್ನೆಲ್ಲ ರಾಷ್ಟ್ರಪತಿಯವರೇ ನಿರ್ಧರಿಸುತ್ತಾರೆ.

Exit mobile version