ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (RSS) ದೇಶಾದ್ಯಂತ ಸೋಮವಾರದಿಂದ ‘ಗರ್ಭ ಸಂಸ್ಕಾರ’ ಅಭಿಯಾನಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇಶದಲ್ಲಿ ಸಂಸ್ಕಾರವಂತ ಹಾಗೂ ದೇಶಭಕ್ತ ಮಕ್ಕಳ ಜನನಕ್ಕಾಗಿ ಗರ್ಭಿಣಿಯರು ಭಗವದ್ಗೀತೆ, ರಾಮಾಯಣ ಗ್ರಂಥಗಳನ್ನು ಓದುವಂತೆ ಪ್ರೋತ್ಸಾಹಿಸಲು ಆರ್‌ಎಸ್‌ಎಸ್ ಅಭಿಯಾನ ಕೈಗೊಳ್ಳುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಂಘದ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್ (Samvardhinee Nyas) ಎಂಬ ಅಂಗಸಂಸ್ಥೆಯಿಂದ ದೇಶಾದ್ಯಂತ ಅಭಿಯಾನ ಕೈಗೊಳ್ಳಲಾಗುತ್ತಿದೆ. “ಜನಿಸುವ ಮಕ್ಕಳಲ್ಲಿ ಸಂಸ್ಕೃತಿ, ಮೌಲ್ಯಗಳು ಹಾಗೂ ದೇಶಭಕ್ತಿ ಅಡಕವಾಗಿರಬೇಕು ಎಂಬ ದೃಷ್ಟಿಯಿಂದ ವೈಜ್ಞಾನಿಕ ದೃಷ್ಟಿಯಿಂದಲೇ ಗರ್ಭ ಸಂಸ್ಕಾರ ಅಭಿಯಾನ ಕೈಗೊಳ್ಳಲಾಗುತ್ತಿದೆ” ಎಂದು ಸಂವರ್ಧಿನಿ ನ್ಯಾಸ್ ಸಂಸ್ಥೆ ತಿಳಿಸಿದೆ.
ಹೇಗೆ ನಡೆಯುತ್ತದೆ ಅಭಿಯಾನ?
“ಗರ್ಭಿಣಿಯರು ಭಗವದ್ಗೀತೆ, ರಾಮಾಯಣದಂತಹ ಧರ್ಮಗ್ರಂಥಗಳನ್ನು ಓದಲು ಪ್ರೋತ್ಸಾಹಿಸುವುದು, ಸಂಸ್ಕೃತದ ಶ್ಲೋಕಗಳನ್ನು ಪಠಿಸುವುದು, ಗರ್ಭವತಿಯಾದ ಬಳಿಕ ಸಾತ್ವಿಕ ಆಹಾರ ಸೇವಿಸುವುದು, ಯೋಗಾಭ್ಯಾಸ ಮಾಡುವುದು ಅಭಿಯಾನದ ಉದ್ದೇಶವಾಗಿದೆ. ಗರ್ಭಿಣಿಯರು ಇಷ್ಟೆಲ್ಲ ಚಟುವಟಿಕೆಗಳು ಆರಂಭಿಸಿ, ಮಗುವಿಗೆ ಎರಡು ವರ್ಷ ತುಂಬುವವರೆಗೆ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸಲಾಗುತ್ತದೆ” ಎಂದು ಮಾಹಿತಿ ನೀಡಿದೆ.
“ಅಭಿಯಾನದ ಜಾರಿಗಾಗಿ ದೇಶದಲ್ಲಿ ಐದು ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಇದಕ್ಕಾಗಿ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ 10 ವೈದ್ಯರು ಇರುತ್ತಾರೆ. ಪ್ರತಿಯೊಬ್ಬ ವೈದ್ಯರು ಆಯಾ ಸೀಮಿತ ಪ್ರದೇಶದ ವ್ಯಾಪ್ತಿಯಲ್ಲಿ ತಲಾ 20 ಗರ್ಭಿಣಿಯರಿಗೆ ಅಭಿಯಾನದ ಜಾರಿ, ಚಟುವಟಿಕೆ ಕೈಗೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ” ಎಂದು ಸಂಸ್ಥೆಯು ವಿವರಿಸಿದೆ.
ಇದನ್ನೂ ಓದಿ: RSS: ʼಆರ್‌ಎಸ್‌ಎಸ್ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ
ವಾಷಿಂಗ್ಟನ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ಭಾಷೆಯನ್ನು ಕಲಿತುಕೊಳ್ಳಲು ಪ್ರಾರಂಭಿಸುತ್ತವೆ. ಗರ್ಭಾವಸ್ಥೆಯ 30 ವಾರಗಳಲ್ಲಿ ಶ್ರವಣೇಂದ್ರಿಯ ಮತ್ತು ಮೆದುಳಿನ ಕಾರ್ಯವಿಧಾನಗಳು ಅಭಿವೃದ್ಧಿಯಾಗುತ್ತದೆ. ಗರ್ಭದಲ್ಲಿರುವ ಮಕ್ಕಳು ಗರ್ಭಾವಸ್ಥೆಯ ಕೊನೆಯ 10 ವಾರಗಳಲ್ಲಿ ತಮ್ಮ ತಾಯಂದಿರ ಮಾತುಗಳನ್ನು ಕೇಳುತ್ತಾರೆ ಎಂದು ತಿಳಿದುಬಂದಿದೆ.