ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ‘ಪ್ರಾಂತ್ ಪ್ರಚಾರಕ್ ಬೈಠಕ್’ ತಮಿಳುನಾಡಿನ ಕೊಯಮತ್ತೂರು ಸಮೀಪದ ಊಟಿಯಲ್ಲಿ ನಡೆಯಿತು. ಜುಲೈ 13-15ರ ವರೆಗೆ ನಡೆದ ಈ ಬೈಠಕ್ ನಲ್ಲಿ ಸಂಘದ ಶಾಖೆಗಳನ್ನು ತಮ್ಮ ಸಾಮಾಜಿಕ ಜವಾಬ್ದಾರಿಗಳಿಗೆ ಅನುಗುಣವಾಗಿ ಹೆಚ್ಚು ಸಕ್ರಿಯ ಗೊಳಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಮಣಿಪುರದದಲ್ಲಿ ಸಂಘದ ಸ್ವಯಂಸೇವಕರು, ಸಮಾಜದ ಪ್ರಜ್ಞಾವಂತ ಜನರೊಂದಿಗೆ ಜೊತೆಗೂಡಿ ಶಾಂತಿ ಮತ್ತು ಪರಸ್ಪರ ವಿಶ್ವಾಸದ ವಾತಾವರಣವನ್ನು ಸೃಷ್ಟಿಸಲು ಮತ್ತು ನೊಂದ ಬಂಧುಗಳಿಗೆ ಅಗತ್ಯ ಸಹಾಯವನ್ನು ನೀಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನೊಂದ ಜನರಿಗಾಗಿ ಸಂಘದ ಸ್ವಯಂಸೇವಕರಿಂದ ನಡೆಯುತ್ತಿರುವ ಸಹಾಯ ಕಾರ್ಯವನ್ನು ವಿಸ್ತರಿಸಲು ಸಭೆಯಲ್ಲಿ ಆಲೋಚಿಸಲಾಯಿತು. ಸಮಾಜದ ಎಲ್ಲಾ ವರ್ಗದವರು ಪರಸ್ಪರ ಸೌಹಾರ್ದತೆ ಮತ್ತು ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳನ್ನು ವೇಗಗೊಳಿಸಲು ನಿರ್ಧರಿಸಲಾಯಿತು. ಇದರೊಂದಿಗೆ ಶಾಶ್ವತ ಶಾಂತಿ ಮತ್ತು ಪುನರ್ವಸತಿಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಯಿತು.
ಸೇವಾ ಕಾರ್ಯಗಳ ಪರಿಶೀಲನೆ
ಸಭೆಯಲ್ಲಿ ಹಿಮಾಚಲದ ಮಂಡಿ, ಕುಲು ಮೊದಲಾದ ಜಿಲ್ಲೆಗಳಲ್ಲಿ ಹಾಗೂ ಉತ್ತರಾಖಂಡ ಮತ್ತು ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದ ಜನರಿಗಾಗಿ ಸಂಘವು ಮಾಡುತ್ತಿರುವ ಸೇವಾ ಕಾರ್ಯಗಳ ಕುರಿತು ಪರಿಶೀಲಿಸಲಾಯಿತು ಜೊತೆಗೆ ತಕ್ಷಣದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಹಿಂದೆ ನಡೆದ ಇತರೆ ಅನಾಹುತಗಳ ನಂತರ ಆಗಿರುವ ಸೇವಾ ಕಾರ್ಯಗಳ ಕುರಿತು ವಿವಿಧ ಪ್ರಾಂತಗಳಿಂದ ಆಗಮಿಸಿದ ಅಧಿಕಾರಿಗಳ ಬಳಿ ಮಾಹಿತಿ ಪಡೆಯಲಾಯಿತು.
ಸಂಘದ ಶಾಖೆಗಳಿಂದ ಸಾಮಾಜಿಕ ಜವಾಬ್ದಾರಿಗಳ ಮೂಲಕ, ತಮ್ಮ ಸುತ್ತಲಿನ ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಅನೇಕ ಸಾಮಾಜಿಕ ಮತ್ತು ಸೇವಾ ಕಾರ್ಯಗಳನ್ನು ಕಾಲಕಾಲಕ್ಕೆ ಮಾಡಲಾಗುತ್ತದೆ. ಸಭೆಯಲ್ಲಿ ಇಂತಹ ಕಾರ್ಯಗಳ ವಿವರಗಳೊಂದಿಗೆ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಪ್ರತಿಯೊಂದು ಶಾಖೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಯೋಜನೆ ರೂಪಿಸಲಾಗಿದೆ.
2023 ರಲ್ಲಿ ಸಂಘದ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷಗಳು ಸೇರಿದಂತೆ ಒಟ್ಟು 105 ಸಂಘ ಶಿಕ್ಷಾ ವರ್ಗಗಳು ಪೂರ್ಣಗೊಂಡಿವೆ, ಇದರಲ್ಲಿ ದೇಶಾದ್ಯಂತ ಒಟ್ಟು 21566 ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ನಲವತ್ತು ವರ್ಷದೊಳಗಿನ 16908 ಶಿಕ್ಷಾರ್ಥಿಗಳು ಹಾಗೂ ನಲವತ್ತರಿಂದ ಅರವತ್ತೈದು ವರ್ಷದೊಳಗಿನ 4658 ಶಿಕ್ಷಾರ್ಥಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಪಡೆದ ಮಾಹಿತಿಯ ಪ್ರಕಾರ, ದೇಶದಾದ್ಯಂತ 39451 ಸ್ಥಳಗಳಲ್ಲಿ ಸಂಘದ 63724 ದೈನಂದಿನ ಶಾಖಾಗಳು, 23299 ಸಾಪ್ತಾಹಿಕ ಮಿಲನ್ ಗಳು ಮತ್ತು 9548 ಮಾಸಿಕ ಮಂಡಲಿಗಳು ನಡೆಯುತ್ತಿವೆ. ಸಭೆಯಲ್ಲಿ ಸಂಘದ ವಿವಿಧ ಕಾರ್ಯಚಟುವಟಿಕೆಗಳ (ಗತಿವಿಧಿಗಳ) ಜೊತೆಗೆ ಮುಂಬರುವ ಶತಮಾನೋತ್ಸವ ವರ್ಷದ ಕಾರ್ಯ ವಿಸ್ತಾರ ಮತ್ತು ಶತಾಬ್ದಿ ವಿಸ್ತಾರಕ್ ಯೋಜನೆಗಳ ಬಗ್ಗೆಯೂ ಆಲೋಚಿಸಲಾಯಿತು.
ಇದನ್ನೂ ಓದಿ : Vistara Top 10 News: ಗೃಹಲಕ್ಷ್ಮಿಗೆ ಮುಹೂರ್ತ ಫಿಕ್ಸ್‌ನಿಂದ, UAE ಜತೆ ಮೋದಿ ಫ್ರೆಂಡ್‌ಶಿಪ್‌ವರೆಗಿನ ಪ್ರಮುಖ ಸುದ್ದಿಗಳಿವು
ಸಭೆಯಲ್ಲಿ ಪ್ರಮುಖವಾಗಿ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಪ್ರಾಂತೀಯ ಪ್ರಚಾರಕರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಎಲ್ಲಾ ಸಹಸರಕಾರ್ಯವಾಹರು ಮತ್ತು ಇತರ ಎಲ್ಲಾ ಅಖಿಲ ಭಾರತ ಮತ್ತು ಕ್ಷೇತ್ರೀಯ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಹಾಗೆಯೇ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಭಾಗವಹಿಸಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.