Site icon Vistara News

RSS Chief Bhagwat | ಮುಸ್ಲಿಮ್ ಪ್ರಮುಖರ ಜತೆ ಭಾಗವತ್! ಕಾಫಿರ್, ಗೋಹತ್ಯೆ, ಜಿಹಾದಿ, ಪಾಕಿಸ್ತಾನಿ ಇತ್ಯಾದಿ ಚರ್ಚೆ

Mohan Bhagwat

ನವ ದೆಹಲಿ: ಸಮಾಜದಲ್ಲಿ ಹದಗೆಡುತ್ತಿರುವ ಶಾಂತಿ ಸೌಹಾರ್ದ ವಾತಾವರಣವನ್ನು ಮತ್ತೆ ಸರಿಪಡಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ (RSS Chief) ಮೋಹನ್ ಭಾಗವತ್ ಅವರು ಮುಸ್ಲಿಮ್ ಸಮುದಾಯದ ಪ್ರಮುಖರು, ವಿದ್ವಾಂಸರ ಜತೆ ಮಾತುಕತೆ ನಡೆಸಿದ್ದಾರೆ. ದಿಲ್ಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅಲಿಗಢ ಮುಸ್ಲಿಮ್ ವಿವಿಯ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದಿನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ಧಿಕಿ, ಉದ್ಯಮಿ ಸಯೀದ್ ಶೇರ್ವಾನಿ ಹಾಗೂ ಮಾಜಿ ಕೇಂದ್ರ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಅವರನ್ನು ಒಳಗೊಂಡ ತಂಡವನ್ನು ಮೋಹನ್ ಭಾಗವತ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮೋಹನ್ ಭಾಗವತ್ ಅವರ ಜತೆಗಿನ ಸಂದರ್ಭದಲ್ಲಿ ದೇಶದಲ್ಲಿ ಸೃಷ್ಟಿಯಾಗುತ್ತಿರುವ ವಿಷಮ ಸ್ಥಿತಿಯ ಬಗ್ಗೆ ತಮ್ಮ ಆತಂಕವನ್ನು ಈ ತಂಡ ಹೊರ ಹಾಕಿತು. ದೇಶದಲ್ಲಿ ಈಗ ನಿರ್ಮಾಣವಾಗುತ್ತಿರುವ ಸ್ಥಿತಿಯ ಬಗ್ಗೆ ತಮಗೂ ಆತಂಕವುಂಟಾಗುತ್ತಿದೆ ಎಂದು ಭಾಗವತ್ ಅವರು ಹೇಳಿದ್ದಾರೆಂಬ ಸಂಗತಿಯನ್ನು ಎಸ್ ವೈ ಖುರೇಷಿ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಸಾಮರಸ್ಯ ವಾತಾವರಣದಿಂದ ಸಂತೋಷವಿಲ್ಲ. ಇದು ಸಂಪೂರ್ಣವಾಗಿ ತಪ್ಪು. ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರವೇ ದೇಶ ಮುನ್ನಡೆಯಲು ಸಾಧ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆಂಬ ಸಂಗತಿಯನ್ನು ಖುರೇಷಿ ಅವರು ಬಹಿರಂಗಪಡಿಸಿದ್ದಾರೆ.

ಹಿಂದೂಗಳಿಗೆ ಗೋ ಹತ್ಯೆ ಅಸಮಾಧಾನ
ಮಾತುಕತೆ ವೇಳೆ ಮೋಹನ್ ಭಾಗವತ್ ಎರಡು ಸಂಗತಿಗಳ ಬಗ್ಗೆ ಅವರು ಆತಂಕಗೊಂಡಿರುವ ವಿಷಯವನ್ನು ತಿಳಿಸಿದರು. ಆ ಪೈಕಿ ಗೋ ಹತ್ಯೆಯು ಹಿಂದೂಗಳಿಗೆ ಬೇಜಾರ ಉಂಟು ಮಾಡುತ್ತಿದೆ ಎಂದು ಹೇಳಿದರು. ಅದಕ್ಕೆ ನಾವು, ”ದೇಶಾದ್ಯಂತ ಗೋ ಹತ್ಯೆಯನ್ನು ನಿಷೇಧಿಸಿ, ಮುಸ್ಲಿಮರಾದ ನಾವು ಕಾನೂನು ಪಾಲನೆಯನ್ನು ಮಾಡುತ್ತೇವೆ. ಒಂದು ವೇಳೆ, ಯಾರಾದರೂ ಉಲ್ಲಂಘಿಸಿದರೆ ಅದು ತಪ್ಪು. ಅಂಥವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ತಿಳಿಸಿದೆವು” ಎಂದು ಖುರೇಷಿ ಹೇಳಿದ್ದಾರೆ.

ಕಾಫಿರ್ ಪದದ ಬಗ್ಗೆ ಅಸಮಾಧಾನ
ಕಾಫಿರ್ ಎಂಬದರ ಬಗ್ಗೆಯೂ ಹಿಂದೂಗಳಿಗೆ ಅಸಮಾಧಾನವಿದೆ ಎಂಬ ಮಾಹಿತಿಯನ್ನು ಭಾಗವತ್ ಅವರು ಮಾತುಕತೆ ವೇಳೆ ತಿಳಿಸಿದರು. ”ಆ ಪದ ಮೂಲತಃ ಅರೇಬಿಕ್ ಭಾಷೆಯದ್ದು. ಕಾಫಿರ್ ಎಂದರೆ ನಂಬಿಕೆಯಿಲ್ಲದವರು ಎಂದು ಅರ್ಥ. ಕೆಲವರು ಇಸ್ಲಾಮ್ ನಂಬುತ್ತಾರೆ, ಅವರನ್ನು ಮೋಮಿನ್ ಎಂದು ಕರೆಯಲಾಗುತ್ತದೆ. ನಾಸ್ತಿಕರನ್ನು ಕಾಫಿರ್ ಎಂದು ಕರೆಯುತ್ತಾರೆ. ಇದು ತಟಸ್ಥ ಪದ. ಅದು ಈಗ ನಿಂದನೆಯ ಎಂಬ ಭಾವನೆಯನ್ನು ಉಂಟು ಮಾಡುತ್ತಿದೆ ಎಂದರೆ, ಅದನ್ನು ಬಳಸದಿರಲು ನಮಗೇನೂ ಅಭ್ಯಂತರವಿಲ್ಲ” ಎಂದು ಖುರೇಷಿ ಹೇಳಿದ್ದಾರೆ.

ಮುಸ್ಲಿಮರನ್ನು ಜಿಹಾದಿ, ಪಾಕಿಸ್ತಾನಿ ಅನ್ನುತ್ತಾರಲ್ಲ
ಮೋಹನ್ ಭಾಗವತ್ ಜತೆಗಿನ ಭೇಟಿ ವೇಳೆ, ಕೆಲವು ಬಲಪಂಥೀಯ ಸಂಘಟನೆಗಳು ಮುಸ್ಲಿಮರನ್ನು ಜಿಹಾದಿಗಳು, ಪಾಕಿಸ್ತಾನಿಗಳ ಕರೆಯುತ್ತಾರೆ ಎಂಬ ಮಾಹಿತಿಯನ್ನು ನೀಡಲಾಯಿತು. ಆಗ ಮೋಹನ್ ಭಾಗವತ್ ಅವರು, ಮುಸ್ಲಿಮರ ನಿಷ್ಠೆ ಬಗ್ಗೆ ಅವರಿಗೆ ಅನುಮಾನಗಳಿವೆ. ಪ್ರತಿ ಗಳಿಗೆಯಲ್ಲೂ ಅವರಿಂದ ದೇಶಭಕ್ತಿಯನ್ನು ನಿರೀಕ್ಷಿಸುತ್ತಾರೆ. ಆದರೆ, ಮುಸ್ಲಿಮರು ಭಾರತೀಯರೇ. ನಾವೆಲ್ಲರೂ ಒಂದೇ ಡಿಎನ್ಎ ಹೊಂದಿದ್ದೇವೆ. ಇಲ್ಲಿನ ಬಹಳಷ್ಟು ಮುಸ್ಲಿಮರು ಮತಾಂತರಗೊಂಡವರು ಎಂದು ಹೇಳಿದರು ಎಂಬ ಮಾಹಿತಿಯನ್ನು ಖುರೇಷಿ ಅವರು ನೀಡಿದ್ದಾರೆ.

ಇಮಾಮ್ ಇಲ್ಯಾಸಿ ಜತೆ ಭಾಗವತ್ ಚರ್ಚೆ
ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿರುವ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಗುರುವಾರ ಅಖಿಲ ಭಾರತ ಇಮಾಮ್ ಸಂಘಟನೆಗಳ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಮಾಮ್ ಅವರ ಜತೆ ಯಾವೆಲ್ಲ ವಿಷಯಗಳ ಬಗ್ಗೆ ಭಾಗವತ್ ಅವರು ಚರ್ಚೆ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ |Mohan Bhagwat | ಮಾದರಿ ಸಮಾಜ ನಿರ್ಮಿಸುವುದೇ ಆರೆಸ್ಸೆಸ್‌ ಗುರಿ ಎಂದ ಮೋಹನ್‌ ಭಾಗವತ್‌

Exit mobile version