Site icon Vistara News

RSS | ಶತಮಾನೋತ್ಸವಕ್ಕೆ ಮುನ್ನ ಸ್ವಯಂಸೇವಕರ ಸಂಖ್ಯೆ ಇಮ್ಮಡಿಗೊಳಿಸಲು ಆರೆಸ್ಸೆಸ್‌ ಸಜ್ಜು

RSS Shows Big Strenth In Tamil Nadu; Holds Massive Rallies Across 45 Places

RSS Shows Big Strenth In Tamil Nadu; Holds Massive Rallies Across 45 Places

ನವ ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 2025ರಲ್ಲಿ ತನ್ನ ಶತಮಾನೋತ್ಸವ ಆಚರಣೆಗೆ ಮುನ್ನ ತನ್ನ ಸ್ವಯಂಸೇವಕರ ಜಾಲವನ್ನು ಇಮ್ಮಡಿಗೊಳಿಸಲು ಉದ್ದೇಶಿಸಿದೆ ಎಂದು ವರದಿಯಾಗಿದೆ.

ಆರೆಸ್ಸೆಸ್‌ ದೇಶದ ಉದ್ದಗಲಕ್ಕೂ, ಪ್ರತಿಯೊಂದು ಜಿಲ್ಲೆಯಲ್ಲಿಯೂ ತನ್ನ ಸ್ವಯಂಸೇವಕರ ನೆಲೆಯನ್ನು ವಿಸ್ತರಿಸಲು ಉದ್ದೇಶಿಸಿದೆ. ಆರೆಸ್ಸೆಸ್‌ನಲ್ಲಿ ಸುಮಾರು ೩,೦೦೦ ಮಂದಿ ಪೂರ್ಣಕಾಲಿಕ ಪ್ರಚಾರಕರು ಇದ್ದು, ಸಂಘದ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಸೇವೆ, ಶಿಕ್ಷಣ, ಸಂಘಟನೆ, ಗುಡ್ಡಗಾಡು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಶತಮಾನೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರೆ ಕಾಲಿಕ ಪ್ರಚಾರಕರು ಅಥವಾ ವಿಸ್ತಾರಕರ ಸಂಖ್ಯೆಯನ್ನು ಇಮ್ಮಡಿಗೊಳಿಸಲು ಸಂಕಲ್ಪಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

” ದೇಶಾದ್ಯಂತ ಸಂಘವು ಹಮ್ಮಿಕೊಳ್ಳುತ್ತಿರುವ ನಾನಾ ಸಮಾಜ ಸೇವಾ ಕಾರ್ಯಕ್ರಮಗಳಿಗೆ ತರಬೇತಿ ನೀಡಿ ಈ ವಿಸ್ತಾರಕರನ್ನು ನಿಯುಕ್ತಿಗೊಳಿಸಲಾಗುವುದು. ೨೦೨೩ರ ಮಾರ್ಚ್‌ ವೇಳೆಗೆ ಸಂಘದ ಶತಮಾನೋತ್ಸವ ಆಚರಣೆ ಆರಂಭವಾಗಲಿದ್ದು, ಆ ವೇಳೆಗೆ ಸ್ವಯಂಸೇವಕರ ಸಂಖ್ಯೆ ಇಮ್ಮಡಿಯಾಗಲಿದೆ. ಸಂಘದ ಶಾಖೆಗಳೂ ವಿಸ್ತರಣೆಯಾಗಲಿದೆʼʼ ಎಂದು ಹೆಸರು ಹೇಳಲು ಇಚ್ಛಿಸದ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

೬೦,೯೨೯ ಶಾಖೆಗಳು: ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ವಾರ್ಷಿಕ ಸಭೆಯಲ್ಲಿ ಮಂಡಿಸಿರುವ ವರದಿಯ ಪ್ರಕಾರ, ಪ್ರಸ್ತುತ ಭಾರತದ ೩೮,೩೯೦ ಸ್ಥಳಗಳಲ್ಲಿ ೬೦,೯೨೯ ಶಾಖೆಗಳು ಸಕ್ರಿಯವಾಗಿವೆ. ಸ್ವಯಂಸೇವಕರು ಸಂಘದ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಬಹುತೇಕ ಪೂರ್ಣಕಾಲಿಕ ಪ್ರಚಾರಕರು ಅವಿವಾಹಿತರಾಗಿದ್ದು, ಸಂಪೂರ್ಣವಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಘವು ನೇರವಾಗಿ ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದನ್ನು ನಿರಾಕರಿಸಿದ್ದರೂ, ಸಂಘದ ಸ್ವಯಂಸೇವಕರ ಅಭಿಮತಗಳು ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುತ್ತವೆ.

ಕೋವಿಡ್-‌೧೯ ಬಿಕ್ಕಟ್ಟಿನ ಸಂದರ್ಭ ಆರೆಸ್ಸೆಸ್‌ ೧೦ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿಗೆ ತರಬೇತಿ ನೀಡಿ, ಬಿಕ್ಕಟ್ಟಿನ ಉಪಶಮನಕ್ಕೆ ನೆರವಾಗಿತ್ತು. ನೈಸರ್ಗಿಕ ವಿಕೋಪಗಳು, ವಿಪತ್ತುಗಳು ಸಂಭವಿಸಿದಾಗ ಆರೆಸ್ಸೆಸ್‌ನ ಸ್ವಯಂಸೇವಕರು ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಸಂಘವು ಹಲವು ವಲಯಗಳಿಗೆ ಆದ್ಯತೆ ನೀಡಿ ಸೇವೆ ಸಲ್ಲಿಸಲು ನಿರ್ಧರಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ, ಆದರೆ ಹೆಚ್ಚು ಚಿರಪರಿಚಿತರಲ್ಲದ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹೋರಾಟಗಾರರನ್ನು ಗುರುತಿಸುವುದು, ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಇತ್ಯಾದಿ ಜನ ಕಲ್ಯಾಣ ಸೇವೆಗಳ ವಿಸ್ತರಣೆ, ಗ್ರಾಮಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ೩೫೦ ಗ್ರಾಮಗಳಲ್ಲಿ ಸಂಕುಲ ಯೋಜನೆ ಮೂಲಕ ಸ್ವಾವಲಂಬನೆಗೆ ಒತ್ತು ನೀಡುವುದು, ಪರಿಸರ ಸಂರಕ್ಷಣೆಗೆ ಆದ್ಯತೆ, ಗಿಡಗಳನ್ನು ನೆಡುವುದು, ಪ್ಲಾಸ್ಟಿಕ್‌ ನಿಷೇಧ ಕುರಿತು ಜನ ಜಾಗೃತಿ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಆರ್‌ಎಸ್‌ಎಸ್‌ ಮುಖಂಡರನ್ನು ಮುಗಿಸಲು ಸಂಚು ರೂಪಿಸಿದ್ದ ಉಗ್ರ

Exit mobile version