Site icon Vistara News

ಸಲಿಂಗ ವಿವಾಹ ಸಾಧ್ಯವಿಲ್ಲ, ರಾಹುಲ್ ಜವಾಬ್ದಾರಿಯಿಂದ ಮಾತನಾಡಲಿ: ಆರೆಸ್ಸೆಸ್

Dattatreya Hosabale

ನವದೆಹಲಿ: ಮದುವೆಗಳು ವಿರುದ್ಧ ಲಿಂಗಗಳ ನಡುವೆ ನಡೆಯಲು ಸಾಧ್ಯ. ಸಲಿಂಗಗಳ ನಡುವೆ ಮದುವೆ ಸಾಧ್ಯವಿಲ್ಲ(same sex marriage) ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಹೇಳಿದ್ದಾರೆ. ಸಲಿಂಗ ಮದುವೆಯನ್ನು ವಿರೋಧಿಸಿ ಕೇಂದ್ರ ಸರ್ಕಾರವು ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್‌ಗೆ ಒಪ್ಪಿಗೆ ಸಲ್ಲಿಸಿತ್ತು. ಈಗ ಆರೆಸ್ಸೆಸ್ ಕೇಂದ್ರ ಸರ್ಕಾರದ ನಿಲುವು ಬೆಂಬಲಿಸಿದೆ.

ಸಲಿಂಗ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ವಿರೋಧಿಸಿತ್ತು. ಸಲಿಂಗ ವಿವಾಹದಿಂದ ವೈಯಕ್ತಿಕ ಕಾನೂನುಗಳು ಮತ್ತು ಅಂಗೀಕೃತ ಸಾಮಾಜಿಕ ಮೌಲ್ಯಗಳ ಸೂಕ್ಷ್ಮ ಸಮತೋಲನವು ಸಂಪೂರ್ಣ ವಿನಾಶವಾಗುತ್ತದೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಈಗ ಆರೆಸ್ಸೆಸ್ ಕೂಡ ಮದುವೆ ಏನಿದ್ದರೂ ವಿರುದ್ಧ ಲಿಂಗಗಳ ನಡುವೆ ಆಗುವಂಥದ್ದು. ಸಲಿಂಗಗಳ ನಡುವೆ ಮದುವೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದೆ.

ರಾಹುಲ್ ಹೆಚ್ಚು ಜವಾಬ್ದಾರಿಯಿಂದ ಮಾತನಾಡಲಿ

ಆರೆಸ್ಸೆಸ್ ಟೀಕಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಹೊಸಬಾಳೆ ಅವರು, ಈ ಬಗ್ಗೆ ಕಮೆಂಟ್ ಮಾಡುವ ಅಗತ್ಯವಿಲ್ಲ. ಅವರು ತಮ್ಮ ರಾಜಕೀಯ ಅಜೆಂಡಾ ಫಾಲೋ ಮಾಡುತ್ತಾರೆ. ಆರೆಸ್ಸೆಸ್ ಬಗೆಗಿನ ವಾಸ್ತಾವಾಂಶ ಪ್ರತಿಯೊಬ್ಬರಿಗೆ ಗೊತ್ತು. ಪ್ರಮುಖ ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಮಾತನಾಡುವುದು ಒಳ್ಳೆಯದು ಎಂದು ಹೇಳಿದರು.

ಇತ್ತೀಚೆಗೆ ರಾಹುಲ್ ಗಾಂಧಿ ಲಂಡನ್‌ನಲ್ಲಿ ಆರ್‌ಎಸ್‌ಎಸ್ ಅನ್ನು ಮೂಲಭೂತವಾದಿ, ಫ್ಯಾಸಿಸ್ಟ್ ಸಂಘಟನೆ ಎಂದು ಟೀಕಿಸಿದ್ದರು. ಆರೆಸ್ಸೆಸ್ ದೇಶದ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಪರ್ಧೆಯ ಸ್ವರೂಪವನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Rahul Gandhi in UK: ರಾಹುಲ್‌ ಜತೆಗೆ ʼಭಾರತದ ದುಃಸ್ಥಿತಿʼ ಬಗ್ಗೆ ಮಾತನಾಡಿದ ʼಆರ್‌ಎಸ್‌ಎಸ್‌ ಸದಸ್ಯನ ಮಗಳುʼ: ಯಾರೀಕೆ?

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಹೆಮ್ಮೆಯ ವಿಷಯವಾಗಿರುವ ಭಾರತದ ಗುರುತನ್ನು ಇಂದಿನ ಕಾಲದಲ್ಲಿ ಪ್ರಪಂಚದ ಮುಂದೆ ಪ್ರಸ್ತುತಪಡಿಸಬೇಕಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ಆರ್ಥಿಕವಾಗಿ ಮತ್ತು ಮೂಲಸೌಕರ್ಯವಾಗಿ ಮಾತ್ರವಲ್ಲದೆ ಕ್ರೀಡೆ ಮತ್ತು ಸಂಸ್ಕೃತಿಯಂತಹ ಇತರ ಹಲವು ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಅವರು ಹೇಳಿದರು.

Exit mobile version