ಚೆನ್ನೈ: ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥ ಸಂಚಲನಕ್ಕೆ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಅಡ್ಡಿಪಡಿಸಲು ಯತ್ನಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್ ಭಾನುವಾರ ಶಕ್ತಿ ಪ್ರದರ್ಶಿಸಿದೆ. ತಮಿಳುನಾಡಿನಲ್ಲಿ ಒಂದೇ ದಿನ 45 ಕಡೆ ಆರ್‌ಎಸ್‌ಎಸ್ ಪಥ ಸಂಚಲನ (RSS Marches) ಕೈಗೊಂಡಿದ್ದು, ಆಡಳಿತಾರೂಢ ಡಿಎಂಕೆಗೆ ತಿರುಗೇಟು ನೀಡಿದೆ. ರ‍್ಯಾಲಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಳಿಕ ಇದೇ ಮೊದಲ ಬಾರಿಗೆ ರ‍್ಯಾಲಿಗಳನ್ನು ಆಯೋಜಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಚೆನ್ನೈ, ಕೊಯಮತ್ತೂರು, ಮದುರೈ, ಹೊಸೂರು, ವೆಲ್ಲೂರು, ಸೇಲಂ, ಕನ್ಯಾಕುಮಾರಿ, ಕರೂರ್, ಅರಣಿ ಸೇರಿ 45 ಕಡೆ ಆರ್‌ಎಸ್‌ಎಸ್ ಕಾರ್ಯಕರ್ತರು ಪಥ ಸಂಚಲನ ಕೈಗೊಂಡಿದ್ದಾರೆ. ಚೆನ್ನೈನ ಕೊರಟ್ಟೂರ್‌ನಲ್ಲಿ 5 ಕಿ.ಮೀ.ವರೆಗೆ ಪಥ ಸಂಚಲನ ಕೈಗೊಳ್ಳಲಾಯಿತು. ಕೇಂದ್ರ ಮೀನುಗಾರಿಕೆ ಹಾಗೂ ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಡಿ.ಎಲ್.ಮುರುಗನ್ ಅವರು ಕೂಡ ಪಥ ಸಂಚಲನದಲ್ಲಿ ಪಾಲ್ಗೊಂಡರು. ರಾಜ್ಯದ ಎಲ್ಲ ಕಡೆಯೂ ಶಾಂತಿಯುತವಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಪಥ ಸಂಚಲನ
ಇದನ್ನೂ ಓದಿ: ಬಹುತೇಕ ಪ್ರಕರಣಗಳಲ್ಲಿ ಆರೆಸ್ಸೆಸ್ ಸದಸ್ಯರು ಬಲಿಪಶುಗಳೇ ಹೊರತು ಅಪರಾಧಿಗಳಲ್ಲ ಎಂದ ಸುಪ್ರೀಂ
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆ ಮೂಲಕ ರಾಜ್ಯಾದ್ಯಂತ ಆರ್‌ಎಸ್‌ಎಸ್ ಪಥ ಸಂಚಲನ ಆಯೋಜನೆಗೆ ಅನುಮತಿ ನೀಡಿತ್ತು. ಹಾಗೆಯೇ, “ಬಹುತೇಕ ಪ್ರಕರಣಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಬಲಿಪಶುಗಳಾಗಿದ್ದಾರೆಯೇ ಹೊರತು ಅಪರಾಧಿಗಳು ಎಂಬುದು ಸಾಬೀತಾಗಿಲ್ಲ” ಎಂದು ಕೋರ್ಟ್ ಹೇಳಿತ್ತು.
ದೇಶಾದ್ಯಂತ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹಾಗಾಗಿ, ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪ್ರತಿ ಗಲ್ಲಿ, ಮೊಹಲ್ಲಾದಲ್ಲಿ ಪಥಸಂಚಲನಕ್ಕೆ ಅವಕಾಶ ನೀಡುವುದು ಅಪಾಯಕಾರಿ ಎಂದು ತಮಿಳುನಾಡು ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಆರ್‌ಎಸ್‌ಎಸ್ ಪರ ವಕೀಲರು ಕೂಡ ವಾದ ಮಂಡಿಸಿ, ರಾಜ್ಯದಲ್ಲಿ ಪಥಸಂಚಲನ ಕೈಗೊಳ್ಳುವಾಗ ಪಿಎಫ್‌ಐನಿಂದ ಅಡ್ಡಿಯುಂಟಾದರೆ, ಬೆದರಿಕೆ ಬಂದರೆ, ರಾಜ್ಯ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಹೇಳಿದ್ದರು. ಕೊನೆಗೆ ನ್ಯಾಯಾಲಯವು ಭದ್ರತೆ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ, ಆರ್‌ಎಸ್‌ಎಸ್ ಪಥ ಸಂಚಲನದ ವೇಳೆ ಪೊಲೀಸರು ಭದ್ರತೆ ಒದಗಿಸಿದ್ದರು.