ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ(BJP Party) ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಗುರುವಾರ ರಾಷ್ಟ್ರೀಯ ಜಾತಿ ಗಣತಿಗೆ (RSS Suports national caste census) ಷರತ್ತುಬದ್ಧ ಬೆಂಬಲವನ್ನು ನೀಡಿದೆ! ಹೌದು, 2024ರ ಲೋಕಸಭೆ ಎಲೆಕ್ಷನ್‌ನಲ್ಲಿ (2024 Lok Sabha election) ಪ್ರಮುಖ ಚುನಾವಣಾ ವಿಷಯವಾಗಲಿರುವ ಜಾತಿ ಗಣತಿಗೆ ಆರೆಸ್ಸೆಸ್ ಷರತ್ತುಬದ್ಧ ಬೆಂಬಲ ನೀಡಿದೆ. ಜಾತಿ ಗಣತಿಯನ್ನು ಕೇವಲ ಚುನಾವಣಾ ಲಾಭಕ್ಕೆ ನಡೆಸದೇ, ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ವೈಜ್ಞಾನಿಕ ಪ್ರಯತ್ನಗಳನ್ನು ಆರೆಸ್ಸೆಸ್ ಸ್ವಾಗತಿಸುತ್ತದೆ ಎಂದು ಹೇಳಿದೆ.
ಆರೆಸ್ಸೆಸ್‌ನ ಹಿರಿಯ ಪದಾಧಿಕಾರಿ ಶ್ರೀಧರ್ ಗಾಡ್ಗೆ ಅವರು ಕೇವಲ ಕೆಲವರ ರಾಜಕೀಯ ಲಾಭಕ್ಕಾಗಿ ನಡೆಸುವ ಯಾವುದೇ ಜಾತಿ ಗಣತಿಯನ್ನು ಆರೆಸ್ಸೆಸ್ ವಿರೋಧಿಸುತ್ತದೆ ಎಂದು ಹೇಳಿದ್ದರು. ಜಾತಿ ಗಣತಿಯಿಂದ ಯಾವುದೇ ವಾಸ್ತವಿಕ ಲಾಭವಲ್ಲ ಎಂದು ಹೇಳಿದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಈಗ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಗುರುವಾರ ಸಂಜೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆರೆಸ್ಸೆಸ್, ನಮ್ಮ ದೃಷ್ಟಿಕೋನವು ಜಾತಿ ಗಣತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಈ ಕಸರತ್ತನ್ನು ನಡೆಸುವಾಗ, ಎಲ್ಲಾ ಪಕ್ಷಗಳು ಸಾಮಾಜಿಕ ಸಾಮರಸ್ಯ ಮತ್ತು ಒಗ್ಗಟ್ಟು ಒಡೆಯದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಹಾಗೆಯೇ, ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಆರ್‌ಎಸ್‌ಎಸ್ ಹೇಳಿದೆ.
ಮಂಗಳವಾರ ಗಾಡ್ಗೆಯವರು ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿವಾರು ಜನಗಣತಿ ಮಾಡಬಾರದು. ಏಕೆಂದರೆ ಹೀಗೆ ಮಾಡಲು ಯಾವುದೇ ಕಾರಣವಿಲ್ಲ. ಅದರಿಂದ ನಾವು ಏನು ಸಾಧಿಸುತ್ತೇವೆ? ಅದು ತಪ್ಪು, ಅಸಮಾನತೆ, ದ್ವೇಷ ಅಥವಾ ಜಗಳ ಇರಬಾರದು ಎಂದು ಹೇಳಿದ್ದರು.
ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸ್ಥಳಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಮೀಸಲಾತಿಯ ಅಗತ್ಯವಿರುವ ಸಮುದಾಯಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ ಎಂಬ ಕಾಂಗ್ರೆಸ್ ವಾದವನ್ನು ಅವರು ತಳ್ಳಿ ಹಾಕಿದ್ದರು.
ಮೀಸಲಾತಿ ಬೇರೆ ವಿಷಯವಾಗಿದ್ದು, ನೀವು ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬಹುದು. ನಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಮತ್ತು ಅದು (ಜಾತಿ) ಮೀಸಲಾತಿ ಅಡಿಯಲ್ಲಿ ಬಂದಾಗ ಅದನ್ನು (ಜಾತಿ) ಉಲ್ಲೇಖಿಸಲಾಗುತ್ತದೆ ಎಂದು ಗಾಡ್ಗೆ ಹೇಳಿದ್ದರು. ಬಿಹಾರ ಸರ್ಕಾರವು ಜಾತಿಗಣತಿಯನ್ನು ಬಿಡುಗಡೆ ಮಾಡಿದ ಬಳಿಕ, ಕಳೆದ ಕೆಲವು ವಾರಗಳಿಂದ ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕವಾಗಿ ಜಾತಿಗಣತಿಯ ಕಾವು ನಿಧಾನವಾಗಿ ಕಾವೇರುತ್ತಿದೆ.
ಜಾತಿ ಗಣತಿ ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟವು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ವಿಧೇಯಕವನ್ನು ಅಂಗೀಕರಿಸಿತು. ಸುಪ್ರೀಂ ಕೋರ್ಟ್‌ನ ಶೇಕಡಾ 50 ರಷ್ಟು ಮಿತಿಯನ್ನು ಮೀರಿ ಮೀಸಲಾತಿಯನ್ನು ತೆಗೆದುಕೊಳ್ಳುವ ವಿಧೇಯಕವು ಈಗ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಬಳಿ ಇದೆ.
ಈ ಸುದ್ದಿಯನ್ನೂ ಓದಿ: Caste Census: ಜಾತಿ ಗಣತಿ ವರದಿ ಸ್ವೀಕಾರ ಬೇಡ; ಸಿಎಂ ಎದುರು ಸಹಿ ಸಂಗ್ರಹಿಸಿ ತೊಡೆ ತಟ್ಟಿದ ಶಾಮನೂರು!