ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) ಮಾರ್ಚ್ 15ರಿಂದ ನಾಗಪುರದಲ್ಲಿ ಮೂರು ದಿನಗಳ ಸಭೆಯನ್ನು ಆಯೋಜಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election) ಮುಂಚಿತವಾಗಿ ಈ ಸಭೆ ನಡೆಯಲಿದ್ದು. 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಮಾರ್ಗಸೂಚಿಯ ಕುರಿತು ಹಿರಿಯ ನಾಯಕರು ಚರ್ಚಿಸಲಿದ್ದಾರೆ. ಏಕರೂಪ ನಾಗರಿಕ ಸಂಹಿತೆಯ ರಾಷ್ಟ್ರವ್ಯಾಪಿ ಅನುಷ್ಠಾನ, ಮಣಿಪುರ ಸಂಘರ್ಷ, ರೈತರ ಪ್ರತಿಭಟನೆಗಳು ಮತ್ತು ಪಶ್ಚಿಮ ಬಂಗಾಳದ ಸಂದೇಶ್ಖಾಲಿ ದೌರ್ಜನ್ಯದಂಥ ವಿಚಾರಗಳು ಇಲ್ಲಿ ಚರ್ಚೆಗೆ ಬರಲಿವೆ.
ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 2025ರಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಆಚರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಹಲವಾರು ನಿರ್ದೇಶನಗಳನ್ನು ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ : DV Sadananda Gowda : ಮತದಾರರಿಗೆ ಧನ್ಯವಾದ ಸಮರ್ಪಿಸಿದ ಡಿವಿಎಸ್; ಟಿಕೆಟ್ ಮಿಸ್ ಗ್ಯಾರಂಟಿ!
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ 350 ಕ್ಕೂ ಹೆಚ್ಚು ಸ್ಥಾನಗಳನ್ನು ಮತ್ತು ಎನ್ಡಿಯ 400ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವ ಮಹತ್ವಾಕಾಂಕ್ಷೆಯನ್ನು ಸಾಧಿಸುವ ಕಾರ್ಯತಂತ್ರಗಳು ಸಭೆಯಲ್ಲಿ ಚರ್ಚೆಯಾಗಲಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಪ್ರಮುಖ ಕಾರ್ಯತಂತ್ರ ಪರಿಣತರಾಗಿರುವ ಸಂತೋಷ್ ಅವರು ಪಕ್ಷದ ಚುನಾವಣಾ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಲಿದ್ದಾರೆ. ಆರ್ಎಸ್ಎಸ್ ನಾಯಕತ್ವದಿಂದ ಮಾಹಿತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಸಭೆಯಲ್ಲಿ ಬಿಜೆಪಿ ಸೇರಿದಂತೆ ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳ ಸುಮಾರು 1,550 ಉನ್ನತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಆರ್ಎಸ್ಎಸ್ ನಾಯಕರಾದ ಮೋಹನ್ ಭಾಗವತ್ ಮತ್ತು ದತ್ತಾತ್ರೇಯ ಹೊಸಬಾಳೆ ಅವರು ಸಂಘ ಪರಿವಾರದ ಹಿರಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಾಧನೆಗಳ ಮೆಲುಕು
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ರಾಮಮಂದಿರವನ್ನು ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವಂತೆ ಬಳಸಿಕೊಳ್ಳುವುದು ಹಾಗೂ ಜನಸಂಖ್ಯಾ ನಿಯಂತ್ರಣ ನೀತಿ ರೂಪಿಸುವ ಬಗ್ಗೆಯೂ ಚರ್ಚೆಗಳು ನಡೆಯಲಿವೆ. ಆದಾಗ್ಯೂ, ಜ್ಞಾನವ್ಯಾಪಿ ಮಸೀದಿ ಮತ್ತು ಮಥುರಾ ಈದ್ಗಾದಂಥ ವಿವಾದಾತ್ಮಕ ವಿಷಯಗಳು ಹಾಲಿ ಸಭೆಯಲ್ಲಿ ಚರ್ಚೆಗೆ ಬರುವುದಿಲ್ಲ ಎನ್ನಲಾಗಿದೆ.
ಮಣಿಪುರದಲ್ಲಿ ಅಂತರ್-ಸಮುದಾಯ ನಡುವಿನ ಸಂಘರ್ಷಗಳನ್ನು ಪರಿಹರಿಸುವುದು, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಪ್ರತಿಭಟನಾ ನಿರತ ರೈತರ ಕಳವಳಗಳನ್ನು ಪರಿಹರಿಸುವುದು ಕಾರ್ಯಸೂಚಿಯ ಇತರ ವಿಷಯಗಳಾಗಿವೆ. ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಸಭೆಯಲ್ಲಿ ಭಾಗಿಯಾಗಲಿದೆ.
ಮೂರು ತಿಂಗಳಿಗೊಮ್ಮೆ ನಡೆಯುವ ಸಭೆ
ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಎಬಿಪಿಎಸ್ ಸಭೆ ನಡೆಯುತ್ತದೆ. ಅಂತೆಯೇ ಹಾಲಿ ಸಭೆಯಲ್ಲಿ ಬಿಪಿಎಸ್ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಿದ್ದು, ಹೊಸಬಾಳೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ.
2025 ರಲ್ಲಿ ಆರ್ಎಸ್ಎಸ್ ತನ್ನ ಶತಮಾನೋತ್ಸವ ಆಚರಿಸಲು ಸಜ್ಜಾಗುತ್ತಿದ್ದಂತೆ, ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಶಾಖೆಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ಯೋಜನೆಗಳು ಈ ಸಭೆಯ ಕಾರ್ಯಸೂಚಿಯಲ್ಲಿವೆ. ಆರ್ ಎಸ್ ಎಸ್ ನ 100ನೇ ವರ್ಷಾಚರಣೆಯ ಸ್ಮರಣಾರ್ಥ ವರ್ಷವಿಡೀ ಆಚರಿಸುವ ಸಲಹೆಗಳು ಚರ್ಚೆಯಾಗಲಿವೆ.