ನವ ದೆಹಲಿ: ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರನ್ನು ಐಸಿಸ್ ಮಾದರಿಯಲ್ಲಿ ಹತ್ಯೆ ಮಾಡಿದ ಹೇಯ ಕೃತ್ಯವನ್ನು ನಾಗರಿಕ ಸಮಾಜವು ಖಂಡಿಸುತ್ತದೆ. ಮುಸ್ಲಿಂ ಸಮುದಾಯ ಕೂಡ ಇದನ್ನು ಖಂಡಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.
ಕನ್ಹಯ್ಯಲಾಲ್‌ನ ಹತ್ಯೆಯ ಬಗ್ಗೆ ಎದ್ದಿರುವ ತೀವ್ರ ಆಕ್ರೋಶದ ನಡುವೆ ಮುಸ್ಲಿಂ ಸಮುದಾಯಕ್ಕೆ ಆರ್‌ಎಸ್‌ಎಸ್ ನೀಡುತ್ತಿರುವ ನೇರ ಸಂದೇಶ ಇದಾಗಿದೆ. ಉದಯಪುರ ಹತ್ಯೆಗೆ ಹಿಂದೂ ಸಮಾಜ ಶಾಂತಿಯುತ ಮತ್ತು ಸಾಂವಿಧಾನಿಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ. ಈ ಕೃತ್ಯವನ್ನು ಮುಸ್ಲಿಂ ಸಮಾಜವೂ ವಿರೋಧಿಸುವ ನಿರೀಕ್ಷೆ ಇದೆ. ಇದನ್ನು ಎಲ್ಲರೂ ಒಟ್ಟಾಗಿ ವಿರೋಧಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದ ಜುಂಜುನುವಿನಲ್ಲಿ ನಡೆದ ಮೂರು ದಿನಗಳ ಪ್ರಾಂತ ಪ್ರಚಾರಕರ ಸಭೆಯ ನಂತರ ಅವರು ಮಾತನಾಡಿದರು.
ಕನ್ಹಯ್ಯಲಾಲ್ ಹತ್ಯೆ ಅತ್ಯಂತ ಖಂಡನೀಯ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುವಾಗ ಸಾರ್ವಜನಿಕ ಭಾವನೆಗಳ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ನಮಗೆ ಸಾಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳಿವೆ. ಏನನ್ನಾದರೂ ಇಷ್ಟಪಡದಿದ್ದರೆ, ಅದಕ್ಕೆ ಪ್ರತಿಕ್ರಿಯಿಸಲು ಪ್ರಜಾಸತ್ತಾತ್ಮಕ ಮಾರ್ಗವಿದೆ. ಆದರೆ ಇಂತಹ ಘಟನೆಗಳು ದೇಶದ ಹಿತಾಸಕ್ತಿಗೆ ಮಾರಕ ಎಂದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಜುಲೈ 7ರಿಂದ 3 ದಿನ ಆರೆಸ್ಸೆಸ್ ಸಮಾವೇಶ, ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಗಂಭೀರ ಚರ್ಚೆ ನಿರೀಕ್ಷೆ
ಸುಸಂಸ್ಕೃತ ಸಮಾಜ ಇಂತಹ ಘಟನೆಯನ್ನು ಖಂಡಿಸುತ್ತದೆ. ಕೆಲವು ಬುದ್ಧಿಜೀವಿಗಳೂ ಇದನ್ನು ವಿರೋಧಿಸಿದ್ದಾರೆ. ಆದರೆ ಮುಸ್ಲಿಂ ಸಮಾಜವು ಮುಂದೆ ಬಂದು ಬಲವಾಗಿ ಧ್ವನಿ ಎತ್ತುವುದು ಅಗತ್ಯವಾಗಿದೆ ಎಂದರು.
ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಲಾಲ್ ಅವರ ಶಿರಚ್ಛೇದ ಮಾಡಿದ್ದ ರಿಯಾಜ್ ಅತ್ತಾರಿ ಮತ್ತು ಗೌಸ್ ಮೊಹಮ್ಮದ್, ಇದನ್ನು ಚಿತ್ರೀಕರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೂಡ ಕೊಲೆ ಬೆದರಿಕೆ ಹಾಕಿದ್ದರು. ಇವರಿಬ್ಬರು ಪ್ರಸ್ತುತ ಎನ್‌ಐಎ ವಶದಲ್ಲಿದ್ದಾರೆ. ತನಿಖೆಯ ಪ್ರಕಾರ, ಕೊಲೆಗಾರರಿಗೆ ಕರಾಚಿ ಮೂಲದ ದಾವತ್-ಎ-ಇಸ್ಲಾಮಿ ಉಗ್ರ ತರಬೇತಿ ನೀಡಿದೆ.
ಕನ್ಹಯ್ಯಾ ಲಾಲ್ ಹತ್ಯೆಯ ವಿರುದ್ಧ ಬರೇಲ್ವಿ ಉಲೇಮಾ ತೀವ್ರ ನಿಲುವು ತಳೆದಿದೆ. ಬರೇಲ್ವಿ ಪಂಥದ ಷರಿಯಾ ನ್ಯಾಯಾಲಯವು ರಿಯಾಜ್ ಅತ್ತಾರಿ ಮತ್ತು ಗೌಸ್ ಮೊಹಮ್ಮದ್ ಇಬ್ಬರೂ ಅಪರಾಧಿಗಳೆಂದು ತೀರ್ಪು ನೀಡಿದೆ.
ಇದನ್ನೂ ಓದಿ: ನಮ್ಮನ್ನು ಏನ್ಮಾಡ್ತಾರೆ? ನೇಣಿಗೆ ಹಾಕ್ತಾರಾ? ಜೀವಾವಧಿ ಶಿಕ್ಷೆ ಕೊಡ್ತಾರಾ? ಕನ್ಹಯ್ಯ ಲಾಲ್ ಹಂತಕರ ಉಡಾಫೆ ಪ್ರಶ್ನೆ!