ನವದೆಹಲಿ: ರಾಜ್ಯಸಭೆಯನ್ನು ಬುದ್ಧಿವಂತರು, ಪ್ರಜ್ಞಾವಂತರ ಸದನ ಎನ್ನಲಾಗುತ್ತಿದೆ. ಸಂಸತ್ತಿನ ಮೇಲ್ಮನೆ ಎಂದೇ ಹೇಳಲಾಗುವ ರಾಜ್ಯಸಭೆ ಸದಸ್ಯರಿಗೆ ಸರ್ಕಾರ ಉತ್ತಮ ಸಂಬಳ ಸೇರಿ ಹಲವು ಸೌಕರ್ಯ ನೀಡುತ್ತದೆ. ಹೀಗೆ, 2021-2023ರ ಅವಧಿಯಲ್ಲಿ ರಾಜ್ಯಸಭೆ ಸದಸ್ಯರಿಗೆ ನೀಡಿದ ಸಂಬಳ, ಪ್ರವಾಸ ವೆಚ್ಚ ಸೇರಿ ಅವರಿಗೆ ವ್ಯಯಿಸಲಾದ ಹಣದ ಕುರಿತು ಆರ್‌ಟಿಐ ಅಡಿಯಲ್ಲಿ ಮಾಹಿತಿ ದೊರೆತಿದೆ. 2021-2023ರಲ್ಲಿ ರಾಜ್ಯಸಭೆ ಸದಸ್ಯರಿಗೆ ಸುಮಾರು 200 ಕೋಟಿ ರೂ. ವ್ಯಯಿಸಲಾಗಿದೆ ಎಂದು ಆರ್‌ಟಿಐ ಮಾಹಿತಿ ತಿಳಿಸಿದೆ.
ಕೊರೊನಾ ನಂತರದ ವರ್ಷದಲ್ಲಿ ಅಂದರೆ, 2021-22ರಲ್ಲಿಯೇ ರಾಜ್ಯಸಭೆ ಸದಸ್ಯರಿಗಾಗಿ 97 ಕೋಟಿ ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ 28.5 ಕೋಟಿ ರೂಪಾಯಿಯನ್ನು ದೇಶೀಯ ಸಂಚಾರ, 1.28 ಕೋಟಿ ರೂಪಾಯಿಯನ್ನು ವಿದೇಶ ಪ್ರಯಾಣಕ್ಕಾಗಿ ವ್ಯಯಿಸಲಾಗಿದೆ. ಸಂಬಳಕ್ಕಾಗಿ ಒಂದು ವರ್ಷದಲ್ಲಿ 57.6 ಕೋಟಿ ರೂಪಾಯಿಯನ್ನು ಸಂಬಳಕ್ಕಾಗಿ ವ್ಯಯಿಸಲಾಗಿದೆ. ಇನ್ನು, ವೈದ್ಯಕೀಯ ವೆಚ್ಚಕ್ಕಾಗಿ 17 ಲಕ್ಷ ರೂ., ಕಚೇರಿ ನಿರ್ವಹಣೆಗೆ 7.5 ಕೋಟಿ ರೂ. ಹಾಗೂ ಮಾಹಿತಿ ತಂತ್ರಜ್ಞಾನದ ನೆರವಿಗಾಗಿ 1.2 ಕೋಟಿ ರೂ. ವ್ಯಯಿಸಲಾಗಿದೆ.
ಇದನ್ನೂ ಓದಿ: ಡಬಲ್ ಆಯ್ತು ದೆಹಲಿ ಶಾಸಕರ ಸಂಬಳ!; 12 ವರ್ಷಗಳ ನಂತರ ಭರ್ಜರಿ ಏರಿಕೆ, ಸಿಎಂ ವೇತನವೆಷ್ಟು ಇನ್ಮುಂದೆ?
2022-23ರಲ್ಲಿ ಸಂಬಳಕ್ಕಾಗಿ 58.5 ಕೋಟಿ ರೂ., ದೇಶೀಯ ಪ್ರಯಾಣಕ್ಕಾಗಿ 30.9 ಕೋಟಿ ರೂ., ವಿದೇಶ ಪ್ರಯಾಣಕ್ಕೆ 2.6 ಕೋಟಿ ರೂ., ವೈದ್ಯಕೀಯ ಚಿಕಿತ್ಸೆಗಾಗಿ 65 ಲಕ್ಷ ರೂ., ಕಚೇರಿ ನಿರ್ವಹಣೆಗೆ 7 ಕೋಟಿ ರೂ. ಹಾಗೂ ಐಟಿ ಸೇವೆಗಳಿಗಾಗಿ 1.5 ಕೋಟಿ ರೂ. ಖರ್ಚು ಮಾಡಲಾಗಿದೆ. ಎರಡು ವರ್ಷದಲ್ಲಿ ಸುಮಾರು 200 ಕೋಟಿ ರೂ. ರಾಜ್ಯಸಭೆ ಸದಸ್ಯರಿಗಾಗಿಯೇ ವ್ಯಯಿಸಲಾಗಿದೆ.
ಫಲಪ್ರದ ಪ್ರಮಾಣ ಎಷ್ಟು?
ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಎಂಬುವರು ಆರ್‌ಟಿಐ ಅಡಿಯಲ್ಲಿ ಕೇಳಿದ ಮಾಹಿತಿಗೆ ರಾಜ್ಯಸಭೆ ಸಚಿವಾಲಯವು ವಿವರ ಒದಗಿಸಿದೆ. ಅದರಂತೆ, 2021ರ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಸಭೆಯ ಫಲಪ್ರದ ಪ್ರಮಾಣವು ಶೇ.43, ಮುಂಗಾರು ಅಧಿವೇಶನ ಶೇ.29 ಹಾಗೂ ಬಜೆಟ್ ಅಧಿವೇಶನ ಶೇ.90ರಷ್ಟು ಫಲಪ್ರದವಾಗಿತ್ತು. 2022ರ ಚಳಿಗಾಲದ ಅಧಿವೇಶನ ಶೇ.94, ಮುಂಗಾರು ಅಧಿವೇಶನ ಶೇ.42 ಹಾಗೂ ಬಜೆಟ್ ಅಧಿವೇಶನ ಶೇ.90ರಷ್ಟು ಫಲಪ್ರದವಾಗಿತ್ತು. ಆದರೆ, ಪ್ರಸಕ್ತ ವರ್ಷದ ಬಜೆಟ್ ಅಧಿವೇಶನವು ಕೇವಲ ಶೇ.24ರಷ್ಟು ಫಲಪ್ರದವಾಗಿದೆ ಎಂದು ಮಾಹಿತಿ ನೀಡಲಾಗಿದೆ.