ನವ ದೆಹಲಿ: ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕಗೊಂಡಿರುವ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಇಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ತಮ್ಮ ಪರಿಚಯದ ಪತ್ರಗಳು, ಅಧಿಕಾರ ಸ್ವೀಕಾರಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿದರು. ಈ ಮೂಲಕ ಅವರು ಅಧಿಕೃತವಾಗಿ ಹುದ್ದೆಗೆ ಏರಿದರು. ಅಂದಹಾಗೇ, ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿಯಾಗಿ ಆಯ್ಕೆಗೊಂಡ ಭಾರತದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರುಚಿರಾ ಪಾತ್ರರಾಗಿದ್ದಾರೆ. ಇವರು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಲಿದ್ದಾರೆ.
ಕಾಯಂ ಪ್ರತಿನಿಧಿಯಾಗಲು ನೀಡಬೇಕಾದ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿದ ರುಚಿರಾ ಕಾಂಬೋಜ್, ‘ನಾನಿನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ/ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ. ಈ ಸ್ಥಾನವನ್ನು ಪಡೆದ ಭಾರತದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರಳಾಗಿದ್ದೇನೆ. ಪ್ರತಿ ಮಹಿಳೆ/ ಯುವತಿಯೂ ಇಂಥ ಘನತೆ-ಗೌರವಕ್ಕೆ ಅರ್ಹಳು. ಮತ್ತು ನಾವೆಲ್ಲರೂ ಇಂಥ ಸಾಧನೆಯನ್ನು ಮಾಡಬಹುದು’ ಎಂದು ಹೇಳಿದ್ದಾರೆ.
ರುಚಿರಾ ಕಾಂಬೋಜ್ ಅವರು 1987ನೇ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆಗಳ ( IFS) ಅಧಿಕಾರಿ. ಭೂತಾನ್ನ ಭಾರತದ ರಾಯಭಾರಿಯಾಗಿದ್ದರು. ಇಷ್ಟು ದಿನ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿಯಾಗಿ ಟಿ. ಎಸ್. ತಿರುಮೂರ್ತಿ ಇದ್ದರು. ಅವರ ಅಧಿಕಾರ ಅವಧಿ ಮುಗಿದಿದ್ದರಿಂದ ಇದೀಗ ರುಚಿರಾ ಆ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ರುಚಿರಾ ಕಾಂಬೋಜ್ ರಾಜತಾಂತ್ರಿಕ ಪ್ರಯಾಣ ಶುರುವಾಗಿದ್ದು 1989ರಿಂದ. ಈ ಈ ವರ್ಷ ಅವರು ಫ್ರಾನ್ಸ್ ರಾಯಭಾರಿಯಾಗಿ ನೇಮಕಗೊಂಡರು. ನಂತರ ಅಲ್ಲಿಂದ 1991ರಲ್ಲಿ ದೆಹಲಿಗೆ ವಾಪಸ್ ಬಂದರು.
2014ರಿಂದೀಚೆಗೆ ಇವರು ಚೀಫ್ ಆಫ್ ಪ್ರೊಟೋಕಾಲ್ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮುಂತಾದ ಗಣ್ಯರು ವಿದೇಶಗಳಿಗೆ ಭೇಟಿ ನೀಡಿದರೆ ಅವರ ಕಾರ್ಯಕ್ರಮಗಳ ಪೂರ್ಣ ಹೊಣೆಯನ್ನು ಇವರು ಹೊರುತ್ತಾರೆ. ಹಲವಾರು ಲೇಖನಗಳನ್ನೂ ಮಾಧ್ಯಮಗಳಿಗೆ ಬರೆದಿದ್ದಾರೆ.
ಇದನ್ನೂ ಓದಿ: IISC ಅಗ್ರಗಣ್ಯ ಭಾರತೀಯ ಶಿಕ್ಷಣ ಸಂಸ್ಥೆ, ಜಾಗತಿಕ ಟಾಪ್ 500ನಲ್ಲಿ ಭಾರತದ 8 IIT