ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆಯ ಸಾವಾಗಿದೆ. ಕಳೆದ ವಾರ ಒಡಿಶಾದ ರಾಯಗಢದ ಹೋಟೆಲ್ವೊಂದರಲ್ಲಿ ರಷ್ಯಾದ ಸಂಸದ ಪಾವೆಲ್ ಆ್ಯಂಟೋವ್ ಮತ್ತು ಅವರ ಆಪ್ತ ವ್ಲಾಡಿಮಿರ್ ಬುಡನೋವ್ ಅವರ ಮೃತದೇಹ ಪತ್ತೆಯಾಗಿತ್ತು. ಇವರಿಬ್ಬರೂ ಎರಡೇ ದಿನಗಳ ಅಂತರದಲ್ಲಿ ಅಂದರೆ ವ್ಲಾಡಿಮಿರ್ ಬುಡನೋವ್ ಡಿಸೆಂಬರ್ 22ರಂದು ಮತ್ತು ಪಾವೆಲ್ ಡಿ.24ರಂದು ಸಾವನ್ನಪ್ಪಿದ್ದರು. ಇವರಿಬ್ಬರ ಸಾವಿನ ಬಗ್ಗೆ ಒಡಿಶಾ ಸರ್ಕಾರ ಉನ್ನತಮಟ್ಟದ ತನಿಖೆಯನ್ನೂ ನಡೆಸುತ್ತಿದೆ.
ಇದೇ ಹೊತ್ತಲ್ಲಿ ರಷ್ಯಾದ ಮತ್ತೊಬ್ಬ ನಾಗರಿಕ ಒಡಿಶಾದ ಪರದೀಪ್ ಬಂದರಿನ ಸಮೀಪ, ಹಡಗಿನಲ್ಲಿಯೇ ಮೃತಪಟ್ಟಿದ್ದಾರೆ. ಇವರ ಹೆಸರು ಸೆರ್ಗೆಯ್ ಮಿಲಿಯಕೋವ್ ಎಂದಾಗಿದ್ದು, 50ವರ್ಷ. ಹಡಗಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದೀಗ ಮೃತಪಟ್ಟಿರುವ ಸೆರ್ಗೆಯ್ ಮಿಲಿಯಕೋವ್ ಅವರು ಎಂವಿ ಅಲ್ಡಾನ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಹಡಗು ಜನವರಿ 2ರಂದು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಹೊರಟು, ಪರದೀಪ್ ಮಾರ್ಗವಾಗಿ ಮುಂಬಯಿಗೆ ಹೋಗುತ್ತಿತ್ತು. ಪರದೀಪ್ ಬಂದರಿನಲ್ಲಿ ಇಂದು (ಜ.3) ಕಬ್ಬಿಣದ ಅದಿರನ್ನು ಲೋಡ್ ಮಾಡಬೇಕಾಗಿರುವ ಕಾರಣ ಇಲ್ಲಿ ಹಡಗು ನಿಲುಗಡೆಯಾಗಬೇಕಿತ್ತು. ಹೀಗೆ ಸೋಮವಾರ ಸಂಜೆ 4ಗಂಟೆಯ ಹೊತ್ತಿಗೆ ಪರದೀಪ್ ಬಂದರಿಗೆ ಹಡಗು ಬಂದಾಗ ಸೆರ್ಗೆಯ್ ಮಿಲಿಯಕೋವ್ ಮೃತಪಟ್ಟಿದ್ದು ಗೊತ್ತಾಗಿದೆ. ಈ ಬಗ್ಗೆ ಹಡಗಿನ ಕ್ಯಾಪ್ಟನ್ ಮೆಸೇಜ್ ಮಾಡಿ, ಪರದೀಪ್ ಬಂದರಿನ ಆಡಳಿತಕ್ಕೆ ತಿಳಿಸಿದ್ದಾರೆ. ಹಾಗೇ ಸೆರ್ಗೆಯ್ ಮಿಲಿಯಕೋವ್ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Russian MP Dies In Odisha | ಪುಟಿನ್ ಟೀಕಾಕಾರರಾಗಿದ್ದ ರಷ್ಯಾ ಸಂಸದ, ಅವರ ಆಪ್ತ ಒಡಿಶಾದಲ್ಲಿ ನಿಗೂಢ ಸಾವು