Site icon Vistara News

S.Jaishankar: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ವಿಚಾರ; ಇದನ್ನು ಬಿಸಿಸಿಐಗೆ ಬಿಡಿ ಎಂದ ವಿದೇಶಾಂಗ ಸಚಿವರು

jaishankar

jaishankar

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈಸಿನಾ ಸಂವಾದ 2024 (Raisina Dialogue 2024) ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ(United Nations Security Council)ಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ (External Affairs Minister) ಎಸ್.ಜೈಶಂಕರ್ (S.Jaishanka) ತಮಾಷೆಯ ಉತ್ತರ ನೀಡಿ ಗಮನ ಸೆಳೆದಿದ್ದಾರೆ. “ಇದನ್ನು ಬಿಸಿಸಿಐಗೆ ಬಿಡಿʼʼ ಎಂದಿರುವುದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದೆ.

ಜೈಶಂಕರ್ ಹೇಳಿದ್ದೇನು?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಭಾರತದ ಶಾಶ್ವತ ಸದಸ್ಯತ್ವದ ವಿಚಾರದಲ್ಲಿ “ಐಸಿಸಿ ಟೆಸ್ಟ್ ಶ್ರೇಯಾಂಕ ಪದ್ಧತಿಯಲ್ಲಿನ ಪರಿಹಾರ”ದ ಬಗ್ಗೆ ಆಸ್ಟ್ರೇಲಿಯಾದ ಗಣ್ಯರ ಸಲಹೆಗೆ ಪ್ರತಿಕ್ರಿಯಿಸಿದ ಜೈಶಂಕರ್, “ಇದನ್ನು ಬಿಸಿಸಿಐಗೆ ಬಿಡಿ” ಎಂದು ಹೇಳಿದರು.

ಸಮ್ಮೇಳನದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಫುಲ್ಲಿಲೋವ್, ಯುಎನ್ಎಸ್‌ಸಿ ಸದಸ್ಯತ್ವವು ಐಸಿಸಿ ಟೆಸ್ಟ್ ಶ್ರೇಯಾಂಕವನ್ನು ಆಧರಿಸಿರಬಹುದು ಎಂದು ಹೇಳಿದರು. “ಯುಎನ್ಎಸ್‌ಸಿ ವ್ಯವಸ್ಥೆ ಸುಧಾರಣೆಯ ಬಗ್ಗೆ ಚಿಂತನೆ ನಡೆದಿದೆ. ಆದರೆ ಕೆಲವೊಮ್ಮೆ ರಾಜತಾಂತ್ರಿಕ ವಿಚಾರದಲ್ಲಿ ಹಲವು ನಿಯಮಗಳು ಕಠಿಣವಾಗಿರುತ್ತವೆ. ಆಗೆಲ್ಲ ನಾವು ಸಾಂಪ್ರದಾಯಿಕವಾಗಿ ಚಿಂತಿಸುವುದುದನ್ನು ಬಿಟ್ಟು ಹೊಸದಾಗಿ ಆಲೋಚಿಸಬೇಕಾಗುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ವಿಚಾರದಲ್ಲಿಯೂ ನಾವು ಹೊಸದಾಗಿ ಚಿಂತನೆ ನಡೆಸಬೇಕಾಗಿದೆ. ನನ್ನ ಚಿಂತನೆ ಎಂದರೆ ಇದಕ್ಕಾಗಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪದ್ಧತಿ ಅನುಸರಿಸಬಹುದುʼʼ ಎಂದು ಫುಲ್ಲಿಲೋವ್ ಹೇಳಿದರು.

ʼʼಈ ರೀತಿಯ ಪದ್ಧತಿ ಅನುಸರಿಸುವುದರಿಂದ ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ಅನುಕೂಲವಾಗುತ್ತದೆ. ಮಾತ್ರವಲ್ಲ ಇದು ವಿಶ್ವದ ಇತರ ಭಾಗಗಳಲ್ಲಿಯೂ ಕ್ರಿಕೆಟ್‌ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಆದ್ದರಿಂದ ಈ ವಿಚಾರದಲ್ಲಿ ಸಚಿವರಾಗಿ ನನ್ನನ್ನು ಬೆಂಬಲಿಸುತ್ತೀರಾ?ʼʼ ಎಂದು ಅವರು ಜೈಶಂಕರ್‌ ಬಳಿ ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಚಿವರು, “ಹೌದು, ಇದನ್ನು ಉತ್ತಮ ಕಲ್ಪನೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಇದನ್ನು ಬಿಸಿಸಿಐಗೆ ಬಿಡುವುದು ಉತ್ತಮ ಎಂಬುದು ನನ್ನ ಭಾವನೆʼʼ ಎಂದು ಹೇಳಿದರು.

ಇದನ್ನು ಓದಿ: S Jaishankar: ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದನೆ

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ ಭೌಗೋಳಿಕ, ರಾಜಕೀಯ ಮತ್ತು ಭೂ ಅರ್ಥಶಾಸ್ತ್ರದ ಭಾರತದ ಪ್ರಮುಖ ಸಮ್ಮೇಳನವಾದ ರೈಸಿನಾ ಸಂವಾದದ ಒಂಬತ್ತನೇ ಆವೃತ್ತಿ ಫೆಬ್ರವರಿ 21ರಂದು ದೆಹಲಿಯಲ್ಲಿ ಪ್ರಾರಂಭವಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಉತ್ತಮವಾಗಿ ಪ್ರತಿನಿಧಿಸಲು ಭಾರತವು ದೀರ್ಘ ಕಾಲದಿಂದ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಬಯಸುತ್ತಿದೆ. ಜಾಗತಿಕ ಶಾಂತಿ ಮತ್ತು ಭದ್ರತೆಗೆ ಧನಾತ್ಮಕವಾಗಿ ಕೊಡುಗೆ ನೀಡುವ ಭಾರತದ ಸಾಮರ್ಥ್ಯದ ಮೇಲೆ ಯುಎನ್‌ಜಿಎ (United Nations General Assembly) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಕೂಡ ವಿಶ್ವಾಸವಿರಿಸಿದ್ದಾರೆ ಎನ್ನುವುದು ಗಮನಾರ್ಹ. ಈ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 2023ರ ಜುಲೈಯಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕಾಗಿ ಬಲವಾದ ಧ್ವನಿಯನ್ನು ಎತ್ತಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version