Site icon Vistara News

ಸಚಿನ್ ಪೈಲಟ್ ಮೇಲೆ ನಿಗಾ, ಫೋನ್ ಕದ್ದಾಲಿಕೆ! ಸಿಎಂ ವಿಶೇಷ ಅಧಿಕಾರಿ ಹೇಳಿಕೆ

Sachin Pilot movements monitored, phone tracked Say OSD for Ashok Gehlot

ನವದೆಹಲಿ: ಸಚಿನ್ ಪೈಲಟ್ (Sachin Pilot) ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಅಷ್ಟೇ ಅಲ್ಲದೇ ಅವರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿತ್ತು (Phone Tracked) ಎಂದು ರಾಜಸ್ಥಾನದ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ವಿಶೇಷ ಅಧಿಕಾರಿಯಾಗಿರುವ ಲೋಕೇಶ್ ಶರ್ಮಾ (OSD Lokesh Sharma) ಅವರು ಹೇಳಿದ್ದಾರೆ. 2020ರಲ್ಲಿ ಸಚಿನ್ ಪೈಲಟ್ ಅವರು ತಮ್ಮ ನಿಷ್ಠ 20 ಶಾಸಕರೊಂದಿಗೆ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದರು. ಈ ವೇಳೆ, ಅವರ ಮೇಲೆ ನಿಗಾವಹಿಸಲಾಗಿತ್ತು. ಇದೊಂದು ಸರ್ವೇ ಸಾಮಾನ್ಯ ಸಂಗತಿ ಎಂದು ಅವರು ಹೇಳಿದ್ದಾರೆ.

ಸಚಿನ್ ಪೈಲಟ್ ಮತ್ತು 18 ಶಾಸಕರು ಮಾನೇಸರ್‌ಗೆ ಹೋದಾಗ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಇತ್ತು. ಅವರ ಯಾರನ್ನು ಭೇಟಿ ಮಾಡುತ್ತಾರೆ ಎಂಬುದನ್ನ ಪತ್ತೆ ಹಚ್ಚಲು ನಿಗಾವಹಿಸಲಾಗುತ್ತಿತ್ತು. ಸರ್ಕಾರವು ಈ ರೀತಿಯ ಕಣ್ಗಾವಲು ಕ್ರಮಗಳನ್ನು ಕೈಗೊಳ್ಳುವುದು ಸಹಜ. ಆಗ ಸರ್ಕಾರವು ಪತನದಂಚಿನಲ್ಲಿತ್ತು ಎಂದು ಅವರು ತಿಳಿಸಿದ್ದಾರೆ.

ನಾವು ಪೈಲಟ್ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಜನರು ಮತ್ತು ಅವರ ಸಭೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೆವು. ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಈ ಮೇಲ್ವಿಚಾರಣೆಯಿಂದಾಗಿ ನಾವು ಕೆಲವು ಜನರನ್ನು ಮರಳಿ ಕರೆತರಲು ಸಾಧ್ಯವಾಯಿತು. ಒಬ್ಬ ವ್ಯಕ್ತಿಯನ್ನು ಅನುಸರಿಸುವುದು ಮೇಲ್ವಿಚಾರಣೆಯ ಒಂದು ಭಾಗವಾಗಿತ್ತು ಎಂದು ಶರ್ಮಾ ಅವರು ತಿಳಿಸಿದ್ದಾರೆ.

2020ರ ಜೂನ್ ತಿಂಗಳಲ್ಲಿ ಪೈಲಟ್ ಮತ್ತು ಅವರನ್ನು ಬೆಂಬಲಿಸುವ ಶಾಸಕರು ಗೆಹ್ಲೋಟ್ ವಿರುದ್ಧ ದಂಗೆ ಎದ್ದಿದ್ದರು. ಇದು ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಮಧ್ಯ ಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಅವರು ತಮ್ಮ 23 ಶಾಸಕರೊಂದಿಗೆ ಬಂಡಾಯ ಎದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದಾಗಿ ಕಾಂಗ್ರೆಸ್ ಸರ್ಕಾರವು ಪತನವಾಗಿತ್ತು. ಇದಾದ ಕೆಲವು ದಿನಗಳಲ್ಲಿ ಜ್ಯೋತಿರಾಧಿತ್ಯ ರೀತಿಯಲ್ಲಿ ಗುರ್ಜರ್ ನಾಯಕ ಸಚಿನ್ ಪೈಲಟ್ ಕೂಡ ಬಂಡಾಯ ಎದ್ದಿದ್ದರು.

ಕಾಂಗ್ರೆಸ್ ಹೈಕಮಾಂಡ್‌ನ ಸಮಯೋಚಿತ ಮಧ್ಯಪ್ರವೇಶದ ನಂತರ ಪೈಲಟ್ ಮತ್ತು ಶಾಸಕರನ್ನು ಮತ್ತೆ ಪಕ್ಷದ ತೆಕ್ಕೆಗೆ ಕರೆತರಲಾಯಿತು. ಆದರೆ, ಈ ರಾಜಕೀಯ ಬಿಕ್ಕಟ್ಟು ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಜಿದ್ಧಾಜಿದ್ದಿಯನ್ನು ಮತ್ತಷ್ಟು ಹೆಚ್ಚಿಸಿತು. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸೋಲು ಅನುಭವಿಸಿದೆ. ಪಕ್ಷದ ಸೋಲಿಗೆ ಗೆಹ್ಲೋಟ್ ಅವರೇ ಕಾರಣ ಎಂದು ಅವರ ವಿಶೇಷ ಅಧಿಕಾರಿ ಶರ್ಮಾ ಅವರು ಆರೋಪಿಸಿದ್ದಾರೆ.

ರಾಜಸ್ಥಾನದ ಫಲಿತಾಂಶದಿಂದ ನನಗೆ ನೋವಾಯಿತು. ಆದರೆ, ಆಶ್ಚರ್ಯವಾಗಿಲ್ಲ. ನಿಸ್ಸಂದೇಹವಾಗಿ, ಕಾಂಗ್ರೆಸ್ ರಾಜಸ್ಥಾನದಲ್ಲಿ ‘ಪದ್ಧತಿ’ಯನ್ನು ಬದಲಾಯಿಸಬಹುದಿತ್ತು ಆದರೆ ಅಶೋಕ್ ಗೆಹ್ಲೋಟ್ ಅವರು ಎಂದಿಗೂ ಯಾವುದೇ ಬದಲಾವಣೆಯನ್ನು ಬಯಸಲಿಲ್ಲ. ಇದು ಕಾಂಗ್ರೆಸ್ ಸೋಲಲ್ಲ, ಆದರೆ ಅಶೋಕ್ ಗೆಹ್ಲೋಟ್ ಅವರು ಸೋಲು ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಬೆಂಗಳೂರಿನ ಜವಳಿ ವ್ಯಾಪಾರಿ ಈಗ ರಾಜಸ್ಥಾನದಲ್ಲಿ ಶಾಸಕ!

Exit mobile version