Site icon Vistara News

Sachin Pilot: ಸಚಿನ್‌ ಬಂಡಾಯ ಬರೀ ‘ಪೈಲಟ್‌’ ಪ್ರಾಜೆಕ್ಟ್‌; ಹೊಸ ಪಕ್ಷ ಘೋಷಣೆ ಇಲ್ಲ, ಮತ್ತೆ ಠುಸ್‌ ಪಟಾಕಿ

Sachin Pilot On New Party

Sachin Pilot Not Announces New Party On His Father's Death Anniversary

ಜೈಪುರ: 2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ, ತಮ್ಮದೇ ಪಕ್ಷದ ನಾಯಕ ಅಶೋಕ್‌ ಗೆಹ್ಲೋಟ್‌ ವಿರುದ್ಧ ಸಚಿನ್‌ ಪೈಲಟ್‌ (Sachin Pilot) ಅವರು ಸತತವಾಗಿ ಬಂಡಾಯದ ಬಾವುಟ ಹಾರಿಸಿದ್ದೇ ಬಂತು. ಆದರೆ ಇದುವರೆಗೆ ಗೆಹ್ಲೋಟ್‌ ವಿರುದ್ಧ ಸಾರಿದ ಒಂದೇ ಒಂದು ಬಂಡಾಯದಲ್ಲಿ ಸಚಿನ್‌ ಪೈಲಟ್‌ ಮುನ್ನಡೆ ಕಂಡಿಲ್ಲ. ಸಚಿನ್‌ ಪೈಲಟ್‌ ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯಸ್ಮರಣೆಯ ದಿನವಾದ ಜೂನ್‌ 11ರಂದು ನೂತನ ಪಕ್ಷ ಸ್ಥಾಪನೆಯ ಘೋಷಣೆ ಮಾಡುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಪುಣ್ಯಸ್ಮರಣೆಯ ದಿನ ಬೃಹತ್‌ ಕಾರ್ಯಕ್ರಮ ಆಯೋಜಿಸಿದ ಸಚಿನ್‌ ಪೈಲಟ್‌, ಹೊಸ ಪಕ್ಷದ ಘೋಷಣೆ ಮಾಡಿಲ್ಲ.

ರಾಜೇಶ್‌ ಪೈಲಟ್‌ ಅವರ ಪುಣ್ಯಸ್ಮರಣೆಯ ಹಿನ್ನಲೆಯಲ್ಲಿ ದೌಸಾದಲ್ಲಿ ಸಚಿನ್‌ ಪೈಲಟ್‌ ಬೃಹತ್‌ ಕಾರ್ಯಕ್ರಮ ಆಯೋಜಿಸಿದ್ದರು. ತಂದೆಯ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ನಮ್ಮ ಸರ್ಕಾರದಲ್ಲಿ ಪ್ರಮುಖ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತದೆ ಎಂದರೆ ನಾನು ಸುಮ್ಮನಿರುವುದಿಲ್ಲ. ನಾನು ಇಟ್ಟಿರುವ ಬೇಡಿಕೆಗಳು ಈಡೇರುವವರೆಗೆ ವಿಶ್ರಮಿಸುವುದಿಲ್ಲ. ರಾಜಕೀಯದಲ್ಲಿ ನಿಮ್ಮ ಅಭಿಪ್ರಾಯ ತಿಳಿಸುವುದು ಪ್ರಮುಖ ಸಂಗತಿಯಾಗಿದೆ. ರಾಜಸ್ಥಾನದ ಯುವಕರ ಧ್ವನಿಯಾಗಿ, ಅವರ ಭವಿಷ್ಯಕ್ಕಾಗಿ ನಾನು ಧ್ವನಿ ಎತ್ತುತ್ತಿದ್ದೇನೆ. ಇದನ್ನು ನಾನು ನಿಲ್ಲಿಸುವುದಿಲ್ಲ” ಎಂದು ಹೇಳಿದರು.

ರಾಜಕೀಯ ಪಂಡಿತರ ವಿಶ್ಲೇಷಣೆ, ರಾಜಸ್ಥಾನ ಕಾಂಗ್ರೆಸ್‌ನ ಮತ್ತೊಂದು ಬಣದ ಸುಳಿವಿನ ಪ್ರಕಾರ ಸಚಿನ್‌ ಪೈಲಟ್‌ ಅವರು ಭಾನುವಾರ ಹೊಸ ಪಕ್ಷ ಘೋಷಣೆ ಮಾಡುತ್ತಾರೆ. ಆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಭಾರಿ ಪೈಪೋಟಿ ನೀಡುತ್ತಾರೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಹೊಸ ಪಕ್ಷ ಘೋಷಣೆ ಮಾಡದೆ ಪೈಲಟ್‌ ಅವರು ತಮ್ಮ ಬೆಂಬಲಿಗರಿಗೆ ನಿರಾಸೆ ಮಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮೊದಲು, ಒಂದಷ್ಟು ಶಾಸಕರ ಬೆಂಬಲದೊಂದಿಗೆ ರೆಸಾರ್ಟ್‌ ರಾಜಕಾರಣ, ತಮ್ಮದೇ ಸರ್ಕಾರದ ವಿರುದ್ಧ ಯಾತ್ರೆ, ಟೀಕೆ, ವ್ಯಂಗ್ಯ, ಆಕ್ರೋಶ ವ್ಯಕ್ತಪಡಿಸಿದರೂ ಸಚಿನ್‌ ಪೈಲಟ್‌ ಯಾವುದೇ ಪ್ರಯತ್ನದಲ್ಲೂ ಯಶಸ್ವಿಯಾಗಿಲ್ಲ,

ರಾಜಸ್ಥಾನ ಕಾಂಗ್ರೆಸ್ ಪಕ್ಷದ ಬಿರುಕು ಮುಚ್ಚುವ ಪ್ರಯತ್ನವನ್ನು ಹೈಕಮಾಂಡ್ ಮಾಡುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅವರು ಇತ್ತೀಚೆಗಷ್ಟೇ ಸಿಎಂ ಅಶೋಕ್ ಹೆಗ್ಲೋಟ್ ಮತ್ತು ಸಚಿನ್ ಪೈಲಟ್ ಜತೆಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆಗಳು ಗಮನಿಸಿದರೆ, ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಮುಸುಕಿನ ಗುದ್ದಾಟ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ: ‘ಸಚಿನ್​ ಪೈಲಟ್​​ರಂಥ ಸಿಎಂ ಬೇಕು’; ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ

ಪೈಲಟ್‌ ಈಗ ಬಂಡಾಯದ ಬಾವುಟ ಬೀಸಿದ್ದೇಕೆ?

ಅಶೋಕ್‌ ಗೆಹ್ಲೋಟ್‌ ಅವರಿಗೆ ಈಗ 72 ವರ್ಷ. ಸಚಿನ್‌ ಪೈಲಟ್‌ ಅವರಿಗೆ 45 ವರ್ಷ ವಯಸ್ಸು. ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಮತ್ತೆ ಗೆಹ್ಲೋಟ್‌ ಅವರೇ ಸಿಎಂ ಆಗುವ ಸಾಧ್ಯತೆ ಇದೆ. ಕಳೆದ ನಾಲ್ಕೂವರೆ ವರ್ಷದಿಂದ ಬಂಡಾಯದಲ್ಲೇ ಕಾಲ ಕಳೆದಿರುವ ಪೈಲಟ್‌ ಈಗ ಶತಾಯಗತಾಯ ಸಿಎಂ ಆಗುವ ಉಮೇದಿಯಲ್ಲಿದ್ದಾರೆ. ಹಾಗಾಗಿಯೇ, ಅವರು ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಜನರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಹಾಗೂ ಗೆಹ್ಲೋಟ್‌ ವಿರುದ್ಧ ಅಲೆ ಸೃಷ್ಟಿಸುವ ಯತ್ನದಲ್ಲಿದ್ದಾರೆ.

Exit mobile version