Site icon Vistara News

Sachin Pilot: ಜನ್ ಸಂಘರ್ಷ ಪಾದಯಾತ್ರೆ ಅಂತ್ಯ, ಭ್ರಷ್ಟಾಚಾರ ಕೇಸುಗಳ ತನಿಖೆಗೆ 15 ದಿನಗಳ ಗಡುವು ವಿಧಿಸಿದ ಸಚಿನ್ ಪೈಲಟ್

http://vistaranews.com/category/national

ಜೈಪುರ, ರಾಜಸ್ಥಾನ: ಈ ಹಿಂದೆ ಆಡಳಿತ ನಡೆಸಿದ ವಸುಂಧರಾ ರಾಜೇ ಅವರ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಆಗ್ರಹಿಸಿ, ತಮ್ಮ ಸರ್ಕಾರದ ವಿರುದ್ಧ ಆರಂಭಿಸಿದ್ದ ಜನ ಸಂಘರ್ಷ ಯಾತ್ರೆಯನ್ನು ಸಚಿನ್ ಪೈಲಟ್ (Sachin Pilot) ಅವರು ಸೋಮವಾರ ಅಂತ್ಯಗೊಳಿಸಿದ್ದಾರೆ. ಪಕ್ಷದ ಹೈಕಮಾಂಡ್‌ಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಯ್ಕೆಯು ಕಗ್ಗಂಟಾಗಿರುವ ಸಂದರ್ಭದಲ್ಲೇ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಕಂದಕ ಇನ್ನಷ್ಟು ಹೆಚ್ಚುತ್ತಲೇ ಇದೆ. ಯಾತ್ರೆಯನ್ನು ಕೊನೆಗೊಳಿಸಿರುವ ಪೈಲಟ್ ಅವರು, ಹಿಂದಿನ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ 15 ದಿನಗಳ ಗಡುವು ವಿಧಿಸಿದ್ದಾರೆ.

ಇದೇ ವೇಳೆ, ತಮ್ಮದೇ ಸರ್ಕಾರದಲ್ಲಿ ರಾಜಸ್ಥಾನ ಲೋಕಸೇವಾ ಆಯೋಗ(RPSC) ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಕುರಿತೂ ಅವರು ಪ್ರಸ್ತಾಪಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಲ ಸೋರಿಕೆಯ ಮೂಲವಾಗಿರುವ ಆರ್‌ಪಿಎಸ್‌ಸಿಯನ್ನು ಪುನರ್ ರಚಿಸಬೇಕು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನಷ್ಟವಾದವರಿಗೆ ಪರಿಹಾರ ನೀಡಬೇಕೆಂದು ಸಚಿನ್ ಪೈಲಟ್ ಹೇಳಿದ್ದಾರೆ.

ನಾವು ಎತ್ತಿರುವ ವಿಷಯಗಳು ಜನಪರವಾಗಿವೆ. ಹಾಗಾಗಿ, ಜನರಿಂದ ಬೆಂಬಲ ಸಿಗುತ್ತಿದೆ. ಮುಖ್ಯಂತ್ರಿಗಳು ರಾಜ್ಯದ ಮುಖ್ಯಸ್ಥರು. ನಾನು ಮತ್ತು ಸಿಎಂ ಅಶೋಕ್ ಗೆಹ್ಲೋಟ್ ಅವರು ಭ್ರಷ್ಟಾಚಾರ ವಿರುದ್ಧ ಒಂದಾಗಿ ಹೋರಾಡಲು ಬದ್ಧರಾಗಿದ್ದೇವೆ. ಹೀಗಿದ್ದಾಗ್ಯೂ, ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ತನಿಖೆ ಆರಂಭಿಸುವಂತೆ ಹಲವಾರು ಬಾರಿ ನಾನು ಪತ್ರ ಬರೆದೆ. ಆದರೆ, ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಸಚಿನ್ ಪೈಲಟ್ ಅವರು ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಚಿನ್ ಪೈಲಟ್ ಅವರು ಅಜ್ಮೇರ್‌ನಿಂದ ಜೈಪುರವರೆಗೆ ಯಾತ್ರೆ ಕೈಗೊಂಡಿದ್ದರು.

ಮುಂಬರುವ ಚುನಾವಣೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿನ್ ಪೈಲಟ್ ಅವರು, ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ವೈಯಕ್ತಿಕ ಮಟ್ಟದಲ್ಲಿ ಯಾರೊಂದಿಗೂ ನಾನು ಭಿನ್ನಾಭಿಪ್ರಾಯವನ್ನೂ ಹೊಂದಿಲ್ಲ ಎಂದರು. ಅಲ್ಲದೇ, ಹಿಂದಿನ ಸರ್ಕಾರದ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಹಾಗಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಜಯ ದೊರೆತಿದೆ ಎಂದು ಸಚಿನ್ ಪೈಲಟ್ ಅವರು ವಿಶ್ಲೇಷಿಸಿದರು.

ಇದನ್ನೂ ಓದಿ: ನಿಮ್ಮ ನಾಯಕಿ ವಸುಂಧರಾ ರಾಜೆನಾ, ಸೋನಿಯಾ ಗಾಂಧಿ ಅಲ್ವಾ?; ಅಶೋಕ್​ ಗೆಹ್ಲೋಟ್​ಗೆ ಸಚಿನ್ ಪೈಲಟ್​ ವ್ಯಂಗ್ಯ

ಸಚಿನ್ ಪೈಲಟ್-ಅಶೋಕ್ ಗೆಹ್ಲೋಟ್ ಮಧ್ಯೆ ಏಕೆ ಸಂಘರ್ಷ?

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನೇತೃತ್ವದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಲು ಮುಂದಾಗಿದ್ದರು. ಆದರೆ, ಶಾಸಕರ ಬೆಂಬಲ ಗೆಹ್ಲೋಟ್ ಕಡೆಗೆ ಇದ್ದಿದ್ದರಿಂದ ಹೈಕಮಾಂಡ್ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಪಟ್ಟ ಕಟ್ಟಿತ್ತು. ಪೈಲಟ್ ಅವರನ್ನು ಡಿಸಿಎಂ ಮಾಡಿ, ಇಬ್ಬರ ನಡುವಿನ ಭಿನ್ನಮತವನ್ನು ತಣ್ಣಗಾಗಿಸಿತ್ತು. ಆದರೆ, ಕೆಲವು ದಿನಗಳ ಬಳಿಕ ಗೆಹ್ಲೋಟ್ ಮತ್ತು ಪೈಲಟ್ ನಡುವೆ ಸಮಸ್ಯೆ ತಲೆದೋರಿತು. ಆಗ, ಪೈಲಟ್ ಅವರು ಬಿಜೆಪಿ ಜತೆಗೂಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನನಡೆಸಿದ್ದಾರೆಂಬ ಆರೋಪ ಕೇಳಿ ಬಂತು. ಇನ್ನೇನು ಸರ್ಕಾರ ಬಿದ್ದೇ ಹೋಯಿತು ಎಂಬ ಹಂತದಲ್ಲಿ ಹೈಕಮಾಂಡ್ ರಾಜಸ್ಥಾನ ಸರ್ಕಾರವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ, ಗೆಹ್ಲೋಟ್ ಅವರು, ಡಿಸಿಎಂ ಸ್ಥಾನದಿಂದ ಪೈಲಟ್ ಅವರನ್ನು ಕಿತ್ತು ಹಾಕಿದರು. ಅಂದಿನಿಂದಲೂ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದ್ದು, ಈವರೆಗೂ ಸರಿ ಹೋಗಿಲ್ಲ.

ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Exit mobile version