ಪಟನಾ: ಬಿಹಾರದ ಮಹಾ ಘಟ್ ಬಂಧನ್ ಸರ್ಕಾರ ಆಡಳಿತ ಶುರು ಮಾಡಿದ ಮುಹೂರ್ತವೇ ಸರಿಯಿಲ್ಲ ಎಂಬಂತಾಗಿದೆ. ಆಗಸ್ಟ್ 16ರಂದು ಒಟ್ಟು 31 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಖಾತೆ ಹಂಚಿಕೆಯೂ ಆಗಿದೆ. ಆದರೀಗ ಜೆಡಿಯು ಶಾಸಕಿ ಬಿಬಾ ಭಾರತಿ ತಾವು ರಾಜೀನಾಮೆ ಕೊಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಜೆಡಿಯುದ ನಾಯಕಿ ಲೇಶಿ ಸಿಂಗ್. ಲೇಶಿ ಸಿಂಗ್ ಈ ಸಲ ಮಹಾ ಘಟ್ ಬಂಧನ್ದಲ್ಲಿ ಸಚಿವ ಸ್ಥಾನ ಪಡೆದು, ಅವರಿಗೆ ಆಹಾರ ಖಾತೆ ನೀಡಲಾಗಿದೆ. ಆದರೆ ‘ಈ ಲೇಶಿ ಸಭ್ಯರಲ್ಲ. ಸುಲಿಗೆ, ಕೊಲೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರು. ಅವರನ್ನು ಕೂಡಲೇ ಸಂಪುಟದಿಂದ ಹೊರಹಾಕಬೇಕು. ಇಲ್ಲವೇ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ಬಿಮಾ ಭಾರತಿ, ಎಚ್ಚರಿಕೆ ನೀಡಿದ್ದಾರೆ.
‘ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂಬ ಬೇಸರ ಖಂಡಿತ ನನಗೆ ಇಲ್ಲ. ಆದರೆ ಲೇಶಿ ಸಿಂಗ್ಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದು ತುಂಬ ಆಘಾತ ಕೊಟ್ಟಿತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪೂರ್ಣಿಯಾ ಜಿಲ್ಲಾ ಪರಿಷತ್ನ ಮಾಜಿ ಸದಸ್ಯ ವಿಶ್ವಜಿತ್ ಸಿಂಗ್ (33) ಎಂಬುವರನ್ನು ಹತ್ಯೆ ಮಾಡಲಾಯಿತು. ಅದರಲ್ಲಿ ಲೇಶಿ ಸಿಂಗ್ ಕೈವಾಡವಿದೆ. ಆದರೆ ಆಕೆ ಆರೋಪವನ್ನು ನಿರಾಕರಿಸುತ್ತಿದ್ದಾರೆ. ಇನ್ನು ಸುಲಿಗೆ ಕೇಸ್ನಲ್ಲೂ ಅವರ ಹೆಸರಿದೆ’ ಎಂದೂ ಹೇಳಿದ್ದಾರೆ. ಬಿಮಾ ಭಾರತಿ ಅವರು ರುಪೌಲಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಲೇಶಿ ಸಿಂಗ್ ಧಮ್ದಾಹ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ನಿತೀಶ್ ಕುಮಾರ್ ಹೇಳಿದ್ದೇನು?
ಬಿಮಾ ಭಾರತಿ ರಾಜೀನಾಮೆ ನೀಡುವುದಾಗಿ ಹೇಳಿದ್ದರ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ, ಅವರು ಪ್ರತಿಕ್ರಿಯೆ ನೀಡಿ, ‘ಯಾರು ಹೀಗೆಲ್ಲ ಹೇಳಿದ್ದು? ಇಂಥದ್ದನ್ನೆಲ್ಲ ಮಾತನಾಡಬಾರದು. ಬಿಮಾ ಭಾರತಿಯವರಿಗೆ ಪಕ್ಷದಿಂದ ಸರಿಯಾಗಿ ವಿವರಣೆ ನೀಡುತ್ತೇವೆ. ಲೇಶಿ ಸಿಂಗ್ ಬಗ್ಗೆ ನಮಗೆ ಯಾವುದೇ ತಕರಾರೂ ಇಲ್ಲ. ಇನ್ನು ಬಿಮಾರನ್ನೂ ಈ ಹಿಂದೆ ಎರಡು ಬಾರಿ ಸಚಿವ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆದರೆ ಆಕೆಗೆ ಸರಿಯಾಗಿ ಮಾತನಾಡಲು, ಓದಲೂ ಬರುವುದಿಲ್ಲ. ನಮ್ಮ ಪಕ್ಷ ಈ ವಿಚಾರವನ್ನು ಸೂಕ್ತವಾಗಿ ನಿಭಾಯಿಸಲಿದೆ. ಆಕೆಯೇನೋ ಪ್ರಚೋದನೆಗೆ ಒಳಗಾದಂತೆ ಇದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಕಾನೂನು ಸಚಿವರಿಗೇ ಬಂಧನ ಭೀತಿ; ಸಂಪುಟದ ಶೇ.72ರಷ್ಟು ಮಂತ್ರಿಗಳ ವಿರುದ್ಧ ಇದೆ ಕ್ರಿಮಿನಲ್ ಕೇಸ್