ನವ ದೆಹಲಿ: ಸಹಾರಾ ಸಮೂಹದ ಕೋಪರೇಟಿವ್ ಸೊಸೈಟಿಗಳಲ್ಲಿ ನಡೆದಿದ್ದ ಹಗರಣಕ್ಕೆ ಸಂಬಂಧಿಸಿ ನಿಜವಾದ ಠೇವಣಿದಾರರಿಗೆ ಅವರ ಹಣವನ್ನು ಮರಳಿಸಲು ಕೇಂದ್ರ ಸರ್ಕಾರ ಸಿಆರ್‌ಸಿಎಸ್-ಸಹಾರಾ ರಿಫಂಡ್ ಪೋರ್ಟಲ್ ಅನ್ನು ಮಂಗಳವಾರ ಆರಂಭಿಸಿದೆ. (Sahara Refund Portal Launched) ಸುಮಾರು 10 ಕೋಟಿ ಠೇವಣಿದಾರರಿಗೆ ಅವರ ಹಣ ಮರಳಿ ಸಿಗಲಿದೆ.
ಸಹಾರಾ ಗ್ರೂಪ್‌ನ ನಾಲ್ಕು ಕೋಪರೇಟಿವ್ ಸೊಸೈಟಿಗಳಲ್ಲಿನ ಹೂಡಿಕೆದಾರರಿಗೆ ಹಣ ಮರಳಿಸುವ ಪ್ರಕ್ರಿಯೆ ನನೆಗುದಿಯಲ್ಲಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಿಫಂಡ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ.
ಯಾರು ಲಾಭ ಪಡೆಯಲಿದ್ದಾರೆ? ಸಹಾರಾ ಕ್ರೆಡಿಟ್ ಕೋಪರೇಟಿವ್ ಸೊಸೈಟಿ, ಸಹಾರ್ಯನ್ ಯುನಿವರ್ಷಸಲ್ ಮಲ್ಟಿಪರ್ಪಸ್ ಸೊಸೈಟಿ, ಹಮಾರಾ ಇಂಡಿಯಾ ಕ್ರೆಡಿಟ್ ಕೋಪರೇಟಿವ್ ಸೊಸೈಟಿ, ಸ್ಟಾರ್ಸ್ ಮಲ್ಟಿಪರ್ಪಸ್ ಕೋಪರೇಟಿವ್‌ನಲ್ಲಿ ಠೇವಣಿ ಇಟ್ಟಿದ್ದ ಠೇವಣಿದಾರರಿಗೆ 9 ತಿಂಗಳಿನೊಳಗೆ ಹಣ ದೊರೆಯಲಿದೆ. ಸುಪ್ರೀಂಕೋರ್ಟ್ ಮಾರ್ಚ್ 29ರಂದು ಸಹಾರಾ-ಸೆಬಿ ರಿಫಂಡ್ ಅಕೌಂಟ್‌ನಿಂದ 5,000 ಕೋಟಿ ರೂ.ಗಳನ್ನು ಸೆಂಟ್ರಲ್ ರಿಜಿಸ್ಟ್ರಾರ್ ಆಫ್ ಕೋಪರೇಟಿವ್ ಸೊಸೈಟೀಸ್‌ಗೆ ವರ್ಗಾವಣೆ ಮಾಡುವಂತೆ ನಿರ್ದೇಶಿಸಿದೆ.
ಆನ್‌ಲೈನ್‌ನಲ್ಲಿ ರಿಫಂಡ್ ಕ್ಲೇಮ್ ಹೇಗೆ? ಸಹಾರಾ ರಿಫಂಡ್ ಪೋರ್ಟಲ್ https://cooperation.gov.in ಮೂಲಕ ರಿಫಂಡ್ ಕ್ಲೇಮ್ ಮಾಡಬೇಕಾಗುತ್ತದೆ. ಈ ವೆಬ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಠೇವಣಿದಾರರು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಮತ್ತು ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಅನ್ನು ಪ್ರೊಸೆಸಿಂಗ್ ಸಲುವಾಗಿ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಸಹಾರಾ ಗ್ರೂಪ್ ಆಫ್ ಕೋಪರೇಟಿವ್ ಸೊಸೈಟೀಸ್ ಕ್ಲೇಮ್ ಅರ್ಜಿಗಳನ್ನು ವೆರಿಫೈ ಮಾಡಲಿದೆ.
ಇದನ್ನೂ ಓದಿ:Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಇಡೀ ಕ್ಲೇಮ್ ಪ್ರೊಸೆಸಿಂಗ್‌ಗೆ 45 ದಿನಗಳು ತಗಲುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಒಟ್ಟು 5,000 ಕೋಟಿ ರೂ. ವಿತರಿಸಲಾಗುವುದು. ಪ್ರತಿ ಠೇವಣಿದಾರರಿಗೆ 10,000 ರೂ. ಮಾತ್ರ ಸಿಗಲಿದೆ.