ಡ್ಯಾನ್ಸರ್ ಮತ್ತು ಕೊರಿಯಾಗ್ರಫರ್ ಆಗಿರುವ ಸಲ್ಮಾನ್ ಯೂಸುಫ್ ಖಾನ್ ಅವರು ತಮಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ಅವಮಾನ ಆಯಿತು. ನನಗೆ ಕನ್ನಡ ಗೊತ್ತಿಲ್ಲ ಎಂಬ ಕಾರಣಕ್ಕೆ ಏರ್ಪೋರ್ಟ್ನಲ್ಲಿರುವ ವಲಸೆ ಅಧಿಕಾರಿ ನನ್ನನ್ನು ಅಪಮಾನ ಮಾಡಿದರು. ಬೆಂಗಳೂರಿನಲ್ಲಿ ಹುಟ್ಟಿದ್ದರೂ ಕನ್ನಡ ಗೊತ್ತಿಲ್ಲವಾ? ಎಂದು ಕೇಳಿದರು. ನಮ್ಮ ರಾಷ್ಟ್ರದ ಅಧಿಕೃತ ಭಾಷೆ ಹಿಂದಿ ಆಗಿರುವಾಗ, ನಾನ್ಯಾಕೆ ಕನ್ನಡ ಕಲಿಯಬೇಕು ಎಂದು ಅವರನ್ನು ನಾನು ಪ್ರಶ್ನಿಸಿದೆ’ ಎಂದು ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಾಕಿ, ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕರು ಪ್ರತಿಕ್ರಿಯೆ ನೀಡಿ ‘ಕನ್ನಡ ಕಲಿಯುವುದರಲ್ಲಿ, ಮಾತಾಡುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ. ಹಾಗೇ, ‘ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯೇ ಅಲ್ಲ, ಎನ್ನುವುದನ್ನು ನೆನಪಿಡಿ’ ಎಂದಿದ್ದಾರೆ.
ಘಟನೆ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ವಿವರಿಸಿದ ಸಲ್ಮಾನ್ ಯೂಸುಫ್ ಖಾನ್ ‘ನಾನು ದುಬೈಗೆ ತೆರಳುವವನಿದ್ದೆ. ಬೆಂಗಳೂರು ಏರ್ಪೋರ್ಟ್ನಲ್ಲಿ ಈ ವಲಸೆ ಅಧಿಕಾರಿ ಎದುರಾದರು. ಅವರು ನನ್ನ ಬಳಿ ಕನ್ನಡದಲ್ಲೇ ಮಾತನಾಡಿದರು. ಆಗ ನಾನು ‘ನನಗೆ ಕನ್ನಡ ಅರ್ಥವಾಗುತ್ತದೆ, ಆದರೆ ಮಾತನಾಡಲು ಬರುವುದಿಲ್ಲ’ ಎಂದು ತೊದಲುತ್ತಲೇ ಹೇಳಿದೆ. ಆದರೆ ಅವರು ನನ್ನ ಬಳಿ ಕನ್ನಡದಲ್ಲೇ ಮಾತನಾಡುತ್ತ, ನನ್ನ ಪಾಸ್ಪೋರ್ಟ್ ತೋರಿಸುವಂತೆ ಹೇಳಿದರು. ನಾನು ತೋರಿಸಿದೆ, ಆಗ ಅವರು ನನ್ನ ಬಳಿ ‘ನೀವು, ನಿಮ್ಮ ತಂದೆ ಹುಟ್ಟಿದ್ದೆಲ್ಲ, ಬೆಂಗಳೂರಿನಲ್ಲೇ. ಆದರೂ ನಿಮಗೆ ಕನ್ನಡ ಬರುವುದಿಲ್ಲವಾ’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಉತ್ತರಿಸಿ ‘ನಾನು ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದ ಮಾತ್ರಕ್ಕೆ, ಕನ್ನಡ ಭಾಷೆಯೊಂದಿಗೇ ಹುಟ್ಟಿದ್ದೇನೆ’ ಎಂದು ಅರ್ಥವಲ್ಲ. ನಾನು ಬೆಂಗಳೂರಲ್ಲಿ ಹುಟ್ಟಿರಬಹುದು. ಆದರೆ ಯಾವಾಗಲೂ ಜಗತ್ತು ಸುತ್ತುತ್ತ ಇರುತ್ತೇನೆ. ಚಿಕ್ಕವನಿದ್ದಾಗಲೇ ಸೌದಿಗೆ ಹೋಗಿ, ಅಲ್ಲಿಯೇ ಬೆಳೆದೆ. ಶಾಲಾದಿನಗಳಲ್ಲಿ ಕನ್ನಡ ಕಲಿಯಲಿಲ್ಲ. ಸ್ವಲ್ಪವೇನಾದರೂ ಕನ್ನಡ ಅರ್ಥವಾಗುತ್ತದೆ ಎಂದಾದರೆ, ಅದು ನನ್ನ ಸ್ನೇಹಿತರ ಮೂಲಕ ಕಲಿತಿದ್ದು, ಎಂದು ಅಧಿಕಾರಿಗೆ ವಿವರಿಸಿದೆ. ಆದರೆ ಆಗ ಅಧಿಕಾರಿ ನನ್ನ ಬಳಿ ‘ನಿಮಗೆ ಕನ್ನಡ ಭಾಷೆ ಬರುವುದಿಲ್ಲ ಎಂದಾದರೆ, ನಾನು ನಿಮ್ಮನ್ನು ಅನುಮಾನದ ಕಣ್ಣಿಂದಲೇ ನೋಡಬೇಕಾಗುತ್ತದೆ’ ಎಂದು ಹೇಳಿದರು. ಇದರಿಂದ ನನಗೆ ತೀರ ಅಪಮಾನ ಆಯಿತು ಎಂದು ಸಲ್ಮಾನ್ ಯೂಸುಫ್ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ಹಿಂದಿ ರಾಷ್ಟ್ರೀಯ ಭಾಷೆ ಆಗಿರುವಾಗ ನಾನ್ಯಾಕೆ ಕನ್ನಡವನ್ನು ಕಲಿಯಬೇಕು? ನೀವು ನನ್ನನ್ನು ಯಾಕೆ ಅನುಮಾನಿಸುತ್ತೀರಿ ಎಂದು ಅಧಿಕಾರಿ ಬಳಿ ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಅವರು ‘ನಾನು ನಿಮ್ಮನ್ನು ಯಾವ ಕಾರಣಕ್ಕೆ ಬೇಕಾದರೂ ಅನುಮಾನಿಸಬಹುದು’ ಎಂದರು. ಆಗ ನಾನು ಸ್ವಲ್ಪ ಗಟ್ಟಿಯಾಗಿ ‘ಏನು ಮಾಡುತ್ತೀರೋ ಮಾಡಿ’ ಎಂದು ಹೇಳಿದೆ. ಜೋರಾಗಿಯೇ ಮೂರು ಬಾರಿ ಹೇಳಿದೆ. ಆಗ ಅವರು ಸುಮ್ಮನಾದರು. ಮತ್ತೆ ನಾನು ಅವರಿಗೆ ಸರಿಯಾಗಿ ಬೈದೆ. ‘ನಿಮ್ಮಂಥ ಅಶಿಕ್ಷಿತರು ಇರುವವರೆಗೆ ಈ ದೇಶ ಬೆಳೆಯುವುದಿಲ್ಲ ಎಂದು ಹೇಳಿದೆ. ಆಗ ಅಧಿಕಾರಿ ತಲೆ ತಗ್ಗಿಸಿದರು. ನಾನು ಬೆಂಗಳೂರಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಆದರೆ ಇಂದು ನನಗೆ ತೀರ ಅವಮಾನವಾಯಿತು. ಯಾರಾದರೂ ಸರಿ, ಸ್ಥಳೀಯ ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕೇ ಹೊರತು, ಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಅವಮಾನಿಸಬಾರದು’ ಎಂದು ಯೂಸುಫ್ ಖಾನ್ ಸುದೀರ್ಘ ಪೋಸ್ಟ್ ಹಾಕಿದ್ದಾರೆ.
ಸದ್ಯಕ್ಕಂತೂ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು, ಬೆಂಗಳೂರಿನಲ್ಲಿ ಏರ್ಪೋರ್ಟ್ನಲ್ಲಿ ಮಾತ್ರವಲ್ಲ, ನಗರದೊಳಗೆ ಕೂಡ ಇಂಥ ಅನುಭವ ಆಗುತ್ತದೆ ಎಂದು ಹೇಳಿದ್ದರೆ, ಇನ್ನೂ ಕೆಲವರು, ಕನ್ನಡ ಕಲಿತರೆ ತಪ್ಪೇನು ಎಂದಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆ ಎಂದು ಅಧಿಕೃತಗೊಂಡಿಲ್ಲ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. ‘ನಾನು ನಿಮ್ಮ ಅಭಿಮಾನಿ, ಆದರೆ ಈ ವಿಷಯದಲ್ಲಿ ನಿಮಗೆ ನನ್ನ ಸಪೋರ್ಟ್ ಇಲ್ಲ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ.