ಲಖನೌ: ಲೋಕಸಭೆ ಚುನಾವಣೆ (Lok Sabha Electio) ಹಿನ್ನೆಲೆಯಲ್ಲಿ ರಾಜಕಾರಣಿಗಳ ಭಾಷಣಗಳು ಮೊನಚಾಗಿವೆ. ಒಂದೊಂದು ವಿಷಯಗಳು ಕೂಡ ವಿವಾದ, ಚರ್ಚೆ, ವಾಗ್ವಾದಗಳಿಗೆ ಕಾರಣವಾಗುತ್ತಿವೆ. ಚುನಾವಣೆ ವೇಳೆ ರಾಮಮಂದಿರ ವಿಷಯವೂ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ರಾಮಮಂದಿರವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ (Ram Gopal Yadav) ಅವರು “ರಾಮಮಂದಿರ ಯೂಸ್‌ಲೆಸ್” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ನ್ಯೂಸ್ 18 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಮ್ ಗೋಪಾಲ್ ಯಾದವ್, “ನಾನು ಪ್ರತಿ ದಿನವೂ ರಾಮನನ್ನು ಆರಾಧಿಸುತ್ತೇನೆ. ಆದರೆ, ಕೆಲವರು ರಾಮನವಮಿಯ ಪೇಟೆಂಟ್‌ಅನ್ನು ತೆಗೆದುಕೊಂಡಿದ್ದಾರೆ. ಇದರ ಮಧ್ಯೆ, ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಿಂದ ಯಾವುದೇ ಉಪಯೋಗವಿಲ್ಲ. ಅದು ಶಾಸ್ತ್ರೋಕ್ತವಾಗಿ ನಿರ್ಮಾಣ ಆಗಿಲ್ಲ. ದೇಶದ ಪುರಾತನ ದೇವಾಲಯಗಳನ್ನು ನೋಡಿಕೊಂಡು ಬನ್ನಿ. ಉತ್ತರದಿಂದ ದಕ್ಷಿಣದವರೆಗೆ ನಿರ್ಮಿಸಿದ ದೇವಾಲಯಗಳನ್ನು ನೋಡಿ. ರಾಮಮಂದಿರವು ನಮ್ಮ ಹಳೆಯ ಮಂದಿರಗಳಂತೆ ನಿರ್ಮಾಣ ಮಾಡಿಲ್ಲ” ಎಂದಿದ್ದಾರೆ.
“ರಾಮಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಮ್ಮ ದೇಶದ ಹಳೆಯ ದೇವಾಲಯಗಳಂತೆ ವೈಜ್ಞಾನಿಕವಾದ ವಾಸ್ತುವನ್ನು ಪಾಲಿಸಿಲ್ಲ. ಯಾರಾದರೂ ಈ ರೀತಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆಯೇ? ದೇವಾಲಯ ನಿರ್ಮಾಣಕ್ಕೂ ಮೊದಲು ಅದರ ಬಗ್ಗೆ ಅಧ್ಯಯನ ನಡೆಯಬೇಕು. ದೇವಾಲಯಗಳ ವಾಸ್ತುವನ್ನು ಅಧ್ಯಯನ ಮಾಡಬೇಕು. ಆ ಮೂಲಕ ವೈಜ್ಞಾನಿಕವಾಗಿ ದೇವಾಲಯವನ್ನು ನಿರ್ಮಾಣ ಮಾಡಬೇಕು. ಆದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ದೇವಾಲಯವು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿಲ್ಲ” ಎಂದು ತಿಳಿಸಿದರು.
ತಿರುಗೇಟು ನೀಡಿದ ಯೋಗಿ
ರಾಮ್ ಗೋಪಾಲ್ ಯಾದವ್ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿರುಗೇಟು ನೀಡಿದ್ದಾರೆ. “ಭಗವಾನ್ ಶ್ರೀರಾಮನಿಗೆ, ರಾಮಮಂದಿರಕ್ಕೆ, ಸನಾತನ ಧರ್ಮಕ್ಕೆ, ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ತಮ್ಮ ವೋಟ್ ಬ್ಯಾಂಕ್‌ಅನ್ನು ಭದ್ರಪಡಿಸಿಕೊಳ್ಳುವುದೇ ಇಂತಹವರ ಉದ್ದೇಶವಾಗಿದೆ. ಆದರೆ, ಒಂದು ವಿಷಯ ನೆನಪಿರಲಿ, ಭಾರತೀಯರ ನಂಬಿಕೆಯ ಬಗ್ಗೆ, ದೈವತ್ವದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ದೈವವೇ ಸರಿಯಾದ ಪಾಠ ಕಲಿಸಿದೆ. ಇದು ಇತಿಹಾಸದಿಂದ ಸಾಬೀತಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ