ನವದೆಹಲಿ: ಸಲಿಂಗ ವಿವಾಹಕ್ಕೆ (Same Sex Marriage) ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ನ್ಯಾಯಾಲಯಗಳು ಸಲಿಂಗ ವಿವಾಹದ ಹಕ್ಕನ್ನು ಗುರುತಿಸುವ ಮೂಲಕ ಕಾನೂನನ್ನು ಸಂಪೂರ್ಣ ಪುನಃ ಬರೆಯಲು ಸಾಧ್ಯವಿಲ್ಲ. ಏಕೆಂದರೆ ಹೊಸ ಸಾಮಾಜಿಕ ಸಂಸ್ಥೆಯ ರಚನೆ ನ್ಯಾಯಾಂಗ ನಿರ್ಣಯದ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದೆ. ಸಲಿಂಗ ವಿವಾಹ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ಅರ್ಹತೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು (Central Governmen) ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿಸಲ್ಲಿಸಿದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದರೆ ಅದು ಮತ್ತೊಂದು ಸಾಮಾಜಿಕ ಸಂಸ್ಥೆಯ ಹುಟ್ಟಿಗೆ ಕಾರಣವಾಗುತ್ತದೆ. ಆದರೆ, ಈ ನಿರ್ಧಾರವು ಕೋರ್ಟ್‌ಗೆ ಸಂಬಂಧಿಸಿದ್ದಲ್ಲ ಎಂದು ಸರ್ಕಾರ ಹೇಳಿದೆ.
ಭಾನುವಾರ ಹೊಸದಾಗಿ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರವು, ಕೋರ್ಟ್ ಮುಂದಿರುವ ಅರ್ಜಿಗಳು ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ‘ನಗರ ಮೇಲಸ್ತರದ ದೃಷ್ಟಿಕೋನ’ಗಳನ್ನು ಮಾತ್ರವೇ ಪ್ರತಿಬಿಂಬಿಸುತ್ತವೆ. ಈ ಅರ್ಜಿಗಳು ಸಮಾಜದ ವಿಶಾಲ ವ್ಯಾಪ್ತಿಯ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಪ್ರತಿಬಿಂಬಿಸುವ ಸೂಕ್ತ ಶಾಸಕಾಂಗದೊಂದಿಗೆ ಸಮೀಕರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆಯ ನೀಡುವ ಕೋರ್ಟ್ ನಿರ್ಧಾರವು, ಒಟ್ಟಾರೆ ಕಾನೂನಗಳನ್ನು ಪುನಃ ಬರೆಯುವ ರೀತಿಯಂತೆ ಕಾಣುತ್ತದೆ. ನ್ಯಾಯಾಲಯವು ಈ ರೀತಿಯ ಅಂತಿಮ ತೀರ್ಪುಗಳನ್ನು ನೀಡುವುದಿರಂದ ಹಿಂದೆ ಸರಿಯಬೇಕು. ಇಂಥ ಕೆಲಸಕ್ಕೆ ಸರಿಯಾದ ಅಧಿಕಾರ ಇರವುದು ಶಾಸಕಾಂಗಕ್ಕೆ ಮಾತ್ರ. ಈ ಕಾನೂನುಗಳ ಮೂಲಭೂತ ಸಾಮಾಜಿಕ ಮೂಲವನ್ನು ಗಮನಿಸಿದರೆ, ಕಾನೂನುಬದ್ಧವಾಗಲು ಯಾವುದೇ ಬದಲಾವಣೆಯು ಕೆಳಗಿನಿಂದ ಮತ್ತು ಶಾಸನದ ಮೂಲಕ ಬರಬೇಕಾಗುತ್ತದೆ. ಬದಲಾವಣೆಯನ್ನು ನ್ಯಾಯಾಂಗ ಮೂಸೆಯಿಂದ ಒತ್ತಾಯಿಸುವುದು ಸರಿಯಲ್ಲ. ಈ ರೀತಿಯ ಸಾಮಾಜಿಕ ಬದಲಾವಣೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಶಾಸಕಾಂಗಕ್ಕೆ (ಸಂಸತ್ತು) ಮಾತ್ರವೇ ಸಾಧ್ಯ ಎಂದು ಅರ್ಜಿಯಲ್ಲಿ ತನ್ನ ವಾದವನ್ನು ತಿಳಿಸಿದೆ.
ಇದನ್ನೂ ಓದಿ: ಸಲಿಂಗ ವಿವಾಹ ಸಾಧ್ಯವಿಲ್ಲ, ರಾಹುಲ್ ಜವಾಬ್ದಾರಿಯಿಂದ ಮಾತನಾಡಲಿ: ಆರೆಸ್ಸೆಸ್
ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಏಪ್ರಿಲ್ 18ರಿಂದ ಸಲಿಂಗ ವಿವಾಹ ಮಾನ್ಯತೆ ಕುರಿತು ವಿಚಾರಣೆ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ತನ್ನ ಅರ್ಜಿಯನ್ನು ಸಲ್ಲಿದೆ. ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಮಾರ್ಚ್ 13ರಂದು ಶಿಫಾರಸು ಮಾಡಲಾಗಿತ್ತು. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯನ್ನು ಕೋರಿ 15ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಒಂದುಗೂಡಿಸಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಗೆ ನೀಡಿದೆ.