Site icon Vistara News

Same sex marriage : ಸಲಿಂಗಿಗಳ ವಿವಾಹಕ್ಕೆ ರಾಜಸ್ಥಾನ ವಿರೋಧ, 6 ರಾಜ್ಯಗಳಿಂದ ಪರಿಶೀಲನೆಗೆ ಅವಕಾಶ ನಿರೀಕ್ಷೆ

supreme court Ballari mines

ನವ ದೆಹಲಿ: ಕಾಂಗ್ರೆಸ್‌ ನೇತೃತ್ವದ ರಾಜಸ್ಥಾನ ಸರ್ಕಾರ ಸಲಿಂಗಿ ವಿವಾಹಕ್ಕೆ (Same sex marriage) ಮಾನ್ಯತೆ ನೀಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಣಿಪುರ, ಅಸ್ಸಾಂ ಮತ್ತು ಸಿಕ್ಕಿಂ ಈ ವಿವಾದವನ್ನು ಪರಿಶೀಲಿಸಲು ಕಾಲಾವಕಾಶ ಕೋರಿವೆ. ಕಳೆದ ಏಪ್ರಿಲ್‌ 19ರಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ವಿವರಣೆಯಲ್ಲಿ, ರಾಜ್ಯ ಸರ್ಕಾರಗಳಿಗೆ ಸಲಿಂಗಿ ವಿವಾಹದ ಪ್ರಸ್ತಾಪದ ಬಗ್ಗೆ ಅಭಿಪ್ರಾಯ ತಿಳಿಸಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಎಂದು ವಿವರಿಸಿತ್ತು.

ಸುಪ್ರೀಂಕೋರ್ಟ್‌ (Supreme Court) ಕಳೆದ ಏಪ್ರಿಲ್‌ 18ರಂದು ತಾನು ನಾನಾ ಧರ್ಮಗಳ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ ಎಂದಿತ್ತು. ಸುಪ್ರೀಂ ಕೋರ್ಟ್‌ ವಿಶೇಷ ಕಾಯಿದೆಯ ಅಡಿಯಲ್ಲಿ (special marriage act) ಸಲಿಂಗಿ ವಿವಾಹವನ್ನು ತರುವ ಬಗ್ಗೆಯೂ ಪರಿಶೀಲಿಸುವುದಿಲ್ಲ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್‌ ಕಳೆದ ಮಂಗಳವಾರ ಪ್ರಕರಣದ ವಿಚಾರಣೆಯ ವೇಳೆ, ವಿವಾಹದ ಪರಿಕಲ್ಪನೆ ಕಾಲಾಂತರದಲ್ಲಿ ವಿಕಾಸವಾಗಿ ಪ್ರಬುದ್ಧತೆ ಪಡೆದಿದೆ. ಹೀಗಾಗಿ ಮದುವೆಯ ಮೂಲ ಪರಿಕಲ್ಪನೆಯನ್ನು ಸ್ವೀಕರಿಸಲೇಬೇಕು. ವಿವಾಹ ಕೇವಲ ಶಾಸನಾತ್ಮಕ ಪರಿಗಣನೆಯ ವಿಚಾರ ಮಾತ್ರ ಅಲ್ಲ ಎಂದು ವಿವರಿಸಿತ್ತು.

ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿರುವುದಕ್ಕೆ ಬಾರ್‌ ಕೌನ್ಸಿಲ್ ‌ ಆಫ್‌ ಇಂಡಿಯಾ (Bar Council of India) ಕಳವಳ ವ್ಯಕ್ತಪಡಿಸಿದ್ದು, ಇದರಿಂದ ದೂರವಿರುವಂತೆ ಮನವಿ ಮಾಡಿದೆ. ಈ ವಿಷಯದಲ್ಲಿ (same-sex marriage) ಸುಪ್ರೀಂಕೋರ್ಟ್‌ ನೀಡುವ ಯಾವುದೇ ತೀರ್ಪು, ದೇಶದ ಸಾಮಾಜಿಕ ರಚನೆಯ ಸ್ವರೂಪವನ್ನು ಅಸ್ಥಿರಗೊಳಿಸಬಹುದು ಹಾಗೂ ಮದುವೆಯ ಮೂಲಭೂತ ಪರಿಕಲ್ಪನೆಗೆ ಧಕ್ಕೆಯಾಗಬಹುದು ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ :Same Sex Marriage: ಸಲಿಂಗಿಗಳ ಸಮಸ್ಯೆ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರ ಒಪ್ಪಿಗೆ; ಆಮದು ಮಾಡಿಕೊಂಡಿದ್ದಲ್ಲ ಎಂದ ಸಿಜೆಐ

ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಎಲ್ಲ ರಾಜ್ಯ ಬಾರ್‌ ಕೌನ್ಸಿಲ್‌ಗಳ ಸಭೆಯನ್ನು ನಡೆಸಿದ ಬಳಿಕ ಈ ಬಗ್ಗೆ ನಿರ್ಣಯ ಕೈಗೊಂಡಿತು. ಭಾರತವು ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ವೈವಿಧ್ಯಮಯವಾಗಿದೆ. ಆದ್ದರದಿಂದ ಮೂಲಭೂತ ಸಾಮಾಜಿಕ ರಚನೆಯೊಂದಿಗೆ ಬೆಸೆದುಕೊಂಡಿರುವ ಯಾವುದೇ ಪ್ರಕರಣಗಳ ತೀರ್ಪು ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ. ಆದಕಾರಣ ಅಂಥ ಬದಲಾವಣೆಗೆ ಶಾಸನಾತ್ಮಕ ಪ್ರಕ್ರಿಯೆಗಳ ಮೂಲಕ ಮಾತ್ರ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಮಾನಿಸುವುದು ದೇಶದ ಭವಿಷ್ಯದ ಪೀಳಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಜಂಟಿ ನಿರ್ಣಯವನ್ನು ಸಭೆಯಲ್ಲಿ ಅವಿರೋಧವಾಗಿ ಕೈಗೊಳ್ಳಲಾಯಿತು.

#image_title

ಬಿಸಿಐ ಪ್ರಕಾರ ಮಾನವನ ನಾಗರಿಕತೆಯ ಆರಂಭದಿಂದಲೂ ಮದುವೆಯನ್ನು ಪುರುಷ ಮತ್ತು ಮಹಿಳೆಯ ನಡುವೆ ಸಂತಾನೋತ್ಪತ್ತಿ ಹಾಗೂ ಉಲ್ಲಾಸದ ಉದ್ದೇಶಗಳಿಗೆ ಮಾಡಿರುವ ಸಾಮಾಜಿಕ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇಂಥ ಹಿನ್ನೆಲೆಯಲ್ಲಿ ಮದುವೆಯ ಮೂಲಭೂತ ಪರಿಕಲ್ಪನೆಯ ವಿಚಾರವಾಗಿ ಯಾವುದೇ ಕೋರ್ಟ್‌ ಮರು ಪರಿಶೀಲನೆಗೆ ಮುಂದಾದರೆ ಅನಾಹುತವಾದೀತು. ಮಾತ್ರವಲ್ಲದೆ 99.9% ಮಂದಿ ನಮ್ಮ ದೇಶದಲ್ಲಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸುತ್ತಿದ್ದಾರೆ. ಅರ್ಜಿದಾರರ ಪರವಾಗಿ ಸುಪ್ರೀಂಕೋರ್ಟ್‌ ಯಾವುದೇ ತೀರ್ಪು ನೀಡಿದರೂ, ನಮ್ಮ ದೇಶದ ಸಾಮಾಜಿಕ ಧಾರ್ಮಿಕ ಸಂಸ್ಕೃತಿಗೆ ವಿರುದ್ಧ ಎಂದು ಬಹುಸಂಖ್ಯಾತ ಮಂದಿ ಭಾವಿಸುವುದು ಖಚಿತ ಎಂದು ನಿರ್ಣಯ ವಿವರಿಸಿದೆ.

ಸುಪ್ರೀಂಕೋರ್ಟ್‌ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೋರಿ ದಾಖಲಾಗಿರುವ 20 ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದೆ. ಆದರೆ ದೇಶದ ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಗೌರವಿಸಬೇಕಾಗುತ್ತದೆ ಎಂದು ಬಾರ್‌ ಕೌನ್ಸಿಲ್‌ ತಿಳಿಸಿದೆ.

ಸಲಿಂಗಿಗಳ ವಿವಾಹ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದರೆ ಭವಿಷ್ಯದಲ್ಲಿ ಮಕ್ಕಳ ಪರಿಸ್ಥಿತಿ ಏನಾಗಬಹುದು ಎಂದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಕಳವಳಪಡುತ್ತಿದ್ದಾರೆ. ಬಾರ್‌ ಕೌನ್ಸಿಲ್‌ ಜನ ಸಾಮಾನ್ಯದ ದನಿಯಾಗಿದೆ. ಆದ್ದರಿಂದ ಈ ಸೂಕ್ಷ್ಮ ವಿಷಯದ ಬಗ್ಗೆ ಕೌನ್ಸಿಲ್‌ ಆತಂಕಪಟ್ಟಿದೆ ಎಂದು ನಿರ್ಣಯ ಹೇಳಿದೆ. ಈ ವಿಷಯವನ್ನು ಶಾಸನಾತ್ಮಕ ನಿರ್ಣಯದ ವಿವೇಚನೆಗೆ ಬಿಡಬೇಕು ಎಂದಿದೆ.

ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ಮದುವೆಗೆ (Same-Sex Marriage) ಕಾನೂನಿನ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 1954ರ ವಿಶೇಷ ವಿವಾಹ ಕಾಯ್ದೆಯು, ಯಾರಿಗೆ ತಮ್ಮ ವೈಯಕ್ತಿಕ ಕಾನೂನಿನಡಿ ಮದುವೆಯಾಗಲು ಸಾಧ್ಯವಾಗುವುದಿಲ್ಲವೋ ಅವರ ವಿವಾಹಕ್ಕೆ ಕಾನೂನಿನ ಮಾನ್ಯತೆಯನ್ನು ಒದಗಿಸುತ್ತದೆ. ಈ ಕಾಯ್ದೆಯಡಿ ತಮಗೂ ವಿವಾಹಕ್ಕೆ ಅವಕಾಶ ಕಲ್ಪಿಸಬೇಕೆಂದು ಎಲ್‌ಜಿಬಿಟಿಕ್ಯೂಪ್ಲಸ್ (LGBTQ+) ಸಮುದಾಯವು ಮೊದಲಿನಿಂದಲೂ ಒತ್ತಾಯಿಸುತ್ತಾ ಬಂದಿದೆ.

ಸಲಿಂಗಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡಾಂಗ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಹಾಗೂ ಜಸ್ಟೀಸ್ ಹಿಮಾ ಕೊಹ್ಲಿ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ. ಸಲಿಂಗಿ ಮದುವೆಗೆ ಕಾನೂನಿನ ಮಾನ್ಯತೆ ನೀಡದಿರುವುದು ತಾರತಮ್ಯಕ್ಕೆ ಸಮವಾಗಿದೆ. ಇದು ಎಲ್‌ಜಿಬಿಟಿಕ್ಯೂಪ್ಲಸ್ ಸಮುದಾಯದ ಘನತೆಗೆ ಮಾಡಿದ ಅಪಮಾನವಾಗುತ್ತದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಪಾರ್ಥ ಫಿರೋಜ್ ಮೆಹ್ರೋತ್ರಾ ಹಾಗೂ ಉದಯ್ ರಾಜ್ ಆನಂದ್ ಎಂಬುವವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್‌ 18ರಂದು ಐದು ನ್ಯಾಯಾಧೀಶರ ಪೀಠ ವಿಚಾರಣೆಯನ್ನು ಆರಂಭಿಸಿದೆ. ಮುಖ್ಯನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌, ರವೀಂದ್ರ ಭಟ್‌, ಹಿಮಾ ಕೊಹ್ಲಿ, ಪಿಎಸ್‌ ನರಸಿಂಹ ಅವರನ್ನು ಪೀಠ ಒಳಗೊಂಡಿದೆ. ಏಪ್ರಿಲ್‌ 25ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ಕೇಂದ್ರದ ವಾದವೇನು?: ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಮಾತ್ರ ಸಲ್ಲತಕ್ಕ ವಿಷಯ, ಇದನ್ನು ಕೋರ್ಟ್‌ಗಳಲ್ಲಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Exit mobile version