Site icon Vistara News

Sanatan Dharma: ಸನಾತನ ಧರ್ಮ ಕೊರೊನಾ ಇದ್ದಂತೆ ಎಂದ ಉದಯನಿಧಿ ಸ್ಟಾಲಿನ್; ಭುಗಿಲೆದ್ದ ವಿವಾದ

Udhayanidhi Stalin

Sanatana Dharma Row: Udhayanidhi Stalin Refuses To Apologise For His Remark

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ, ಸಚಿವರೂ ಆದ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ (Sanatan Dharma) ಕುರಿತು ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. “ಸನಾತನ ಧರ್ಮವು ಮಲೇರಿಯಾ, ಕೊರೊನಾ ಹಾಗೂ ಡೆಂಗ್ಯೂ ಇದ್ದಂತೆ” ಎಂದು ಉದಯನಿಧಿ (Udhayanidhi Stalin) ಸ್ಟಾಲಿನ್‌ ಹೇಳಿದ್ದು, ಅವರ ಹೇಳಿಕೆಗೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿವೆ.

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಉದಯನಿಧಿ ಸ್ಟಾಲಿನ್‌ ಮಾತನಾಡಿದರು. “ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದರು.

“ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾದಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿದರು.

ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ

ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಎಂ.ಕೆ.ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿದ್ದಾರೆ. ಉದಯನಿಧಿ ಸ್ಟಾಲಿನ್‌ ಅವರ ಅಭಿಪ್ರಾಯವನ್ನು ವಿರೋಧಿಸುವ ಬದಲು ಅಭಿಪ್ರಾಯವನ್ನೇ ನಿರ್ಮೂಲನೆ ಮಾಡಬೇಕು. ಅವರು ಸನಾತನ ಧರ್ಮವನ್ನು ಅನುಸರಿಸುವ ದೇಶದ ಶೇ.80ರಷ್ಟು ಜನರ ಹತ್ಯೆಗೆ ಕರೆ ನೀಡಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್‌ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ವಿವಾದದ ಬಳಿಕ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್‌, “ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾನೂನು ಹೋರಾಟ ಸೇರಿ ಯಾವುದೇ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

Exit mobile version