ನವದೆಹಲಿ: ಸನಾತನ ಧರ್ಮವನ್ನು (Sanatan Dharma row) ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವರೂ ಆಗಿರುವ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಸೋಮವಾರ ದಿಲ್ಲಿಯ ತಮಿಳುನಾಡು ಭವನದ ಬಳಿ ಸಾಧು, ಸಂತರು ಪ್ರತಿಭಟನೆ ನಡೆಸಿದರು(Hindu Saints protest). ಬಳಿಕ, ಉದಯನಿಧಿ ಸ್ಟಾಲಿನ್ ಸೇರಿದಂತೆ ಇತರ ನಾಯಕರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ದೆಹಲಿ ಸಂತ ಮಹಾಮಂಡಲದ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾಕಾರರು ಉದಯನಿಧಿ ಸ್ಟಾಲಿನ್ ಮತ್ತು ಇತರ ನಾಯಕರನ್ನು ಖಂಡಿಸುವ ಫಲಕಗಳನ್ನು ಹಿಡಿದು ಸರೋಜಿನಿ ನಗರದ ದೇವಸ್ಥಾನದಿಂದ ತಮಿಳುನಾಡು ಭವನದ ಕಡೆಗೆ ಮೆರವಣಿಗೆ ನಡೆಸಿದರು. ತಮಿಳು ನಾಡು ಭವನದತ್ತ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು, ಆಫ್ರಿಕಾ ಅವೆನ್ಯೂದಲ್ಲಿ ತಡೆದರು. ಹಾಗಾಗಿ, ಅದೇ ಪ್ರದೇಶದಲ್ಲಿ ಪ್ರತಿಭಟನಾ ನಿರತ ಸಂದತರು, ತಮಿಳುನಾಡು ಸಚಿವ ಉದಯನಿಧಿ ಮತ್ತು ಇತರರ ಪ್ರತಿಕೃತಿಗಳನ್ನು ಸುಟ್ಟುಹಾಕಿ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುವುದರಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮುಖಂಡರನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ, ಸನಾತನ ಧರ್ಮದ ನಿರ್ಮೂಲನೆ ಅಗತ್ಯ ಎಂದು ಹೇಳಿದ್ದ ಪುತ್ರ ಉದಯನಿಧಿಯ ಪರವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಈ ವೇಳೆ ಮಾತನಾಡಿದ ದೆಹಲಿ ಸಂತ ಮಹಾಮಂಡಲ್ ಅಧ್ಯಕ್ಷ ನಾರಾಯಣ ಗಿರಿ ಮಹಾರಾಜ್ ಅವರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಯಾಕೆ ಮೌನವಾಗಿವೆ ಎಂದು ಪ್ರಶ್ನಿಸಿದರು. ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳ ದ್ವೇಷದ ಮಾತುಗಳನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ, ಸನಾತನ ಧರ್ಮದ ವಿರುದ್ಧ ರಾಜಕಾರಣಿಗಳು ಬಳಸುತ್ತಿರುವ ಭಾಷೆಯು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ ಮತ್ತು ಅಂತಹ ರಾಜಕೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.