Site icon Vistara News

Sanatana Dharma: ಸನಾತನ ಧರ್ಮ ಶಾಶ್ವತ ಎಂದ ಮದ್ರಾಸ್‌ ಹೈಕೋರ್ಟ್;‌ ಉದಯನಿಧಿಗೆ ಮಂಗಳಾರತಿ

Madras High Court On Sanatana Dharma

Sanatana Dharma is a set of eternal duties; Says Madras High Court

ಚೆನ್ನೈ: ‘ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡಬೇಕು’ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ ಹೇಳಿಕೆಯು ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಸಾಮಾನ್ಯ ಜನರು ಕೂಡ ಉದಯನಿಧಿ ಸ್ಟಾಲಿನ್‌ (Udhayanidhi Stalin) ಹೇಳಿಕೆಯನ್ನು ಖಂಡಿಸಿದ್ದಾರೆ. ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, “ಸನಾತನ ಧರ್ಮದ ಆಚರಣೆಗಳು ಶಾಶ್ವತ” ಎಂದು ಮದ್ರಾಸ್‌ ಹೈಕೋರ್ಟ್‌ (Madras High Court) ಹೇಳಿರುವುದು ಉದಯನಿಧಿ ಸ್ಟಾಲಿನ್‌ ಅವರಿಗೆ ಪರೋಕ್ಷವಾಗಿ ಮಂಗಳಾರತಿ ಮಾಡಿದಂತಾಗಿದೆ.

“ಸನಾತನ ಧರ್ಮವು ಹಲವು ಶಾಶ್ವತ ಆಚರಣೆಗಳ ಗುಚ್ಛವಾಗಿದೆ. ಇದು ಒಂದು ದೇಶಕ್ಕೆ ಇರಬೇಕಾದ ಕರ್ತವ್ಯ, ಗುರುವಿಗೆ ಇರಬೇಕಾದ ಗೌರವ, ರಾಜನಿಗೆ ತೋರಬೇಕಾದ ಮರ್ಯಾದೆಯಂತೆಯೇ ಹಲವು ಶಾಶ್ವತ ಕರ್ತವ್ಯಗಳ. ಗುಚ್ಛವಾಗಿ ಸನಾತನ ಧರ್ಮ ರೂಪುಗೊಂಡಿದೆ. ಇಂತಹ ಆಚರಣೆಗಳನ್ನು ಹೇಗೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ? ಸನಾತನ ಧರ್ಮವು ಹಿಂದು ಜೀವನ ವಿಧಾನ ಆಗಿರಬಹುದು, ಯಾವುದೇ ಗ್ರಂಥಗಳಾಗಿರಬಹುದು. ಅದರ ಮೂಲ ಯಾವುದೇ ಆಗಿರಬಹುದು. ಅದನ್ನು ನಾಶಪಡಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎನ್‌.ಶೇಷಸಾಯಿ ಹೇಳಿದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಜನ್ಮದಿನದ ಹಿನ್ನೆಲೆಯಲ್ಲಿ ತಿರು ವಿ.ಕ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರು, “ಸನಾತನ ಧರ್ಮಕ್ಕೆ ವಿರೋಧ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಮಂಡಿಸಬೇಕು ಎಂಬುದಾಗಿ ಸುತ್ತೋಲೆ ಹೊರಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ವೇಳೆ ನ್ಯಾ.ಎನ್‌.ಶೇಷಸಾಯಿ ಅವರು ಸನಾತನ ಧರ್ಮದ ಕುರಿತು ಹೇಳಿದರು. ಹಾಗೆಯೇ, ಪರೋಕ್ಷವಾಗಿ ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನೂ ಅಲ್ಲಗಳೆದರು.

“ಸನಾತನ ಧರ್ಮ ಎಂದರೆ ಅಸಮಾನತೆ, ಅಸ್ಪೃಶ್ಯತೆ ಎಂಬಂತೆ ಬಿಂಬಿಸಲಾಗಿದೆ. ಆದರೆ, ಸಂವಿಧಾನವೇ ಅಸ್ಪೃಶ್ಯತೆ, ಅಸಮಾನತೆಯನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತದೆ. ಇಷ್ಟಾದರೂ ಅಸಮಾನತೆ, ಅಸ್ಪೃಶ್ಯತೆ ಇರುವುದು ದುಃಖದ ವಿಚಾರ. ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ, ಇದು ದ್ವೇಷ ಹರಡಲು ಬಳಸಬಾರದು. ಯಾವುದೇ ಧರ್ಮದ ಆಚರಣೆ, ನಂಬಿಕೆಗಳಿಗೆ ಘಾಸಿಯಾಗುವ ಅಭಿವ್ಯಕ್ತಿ ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sanatana Dharma: ಸನಾತನ ಧರ್ಮದ ನಿರ್ನಾಮವೇ ‘ಇಂಡಿಯಾ ಒಕ್ಕೂಟ’ದ ಗುರಿ; ಚಾಟಿ ಬೀಸಿದ ಮೋದಿ

ಉದಯನಿಧಿ ಸ್ಟಾಲಿನ್ ಹೇಳಿದ್ದಿಷ್ಟು…

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

Exit mobile version