ಚೆನ್ನೈ: “ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ಹೇಳಿಕೆ ನೀಡಿ ಭಾರಿ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗೆ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ, ನಟ, ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಉದಯನಿಧಿ ಸ್ಟಾಲಿನ್ ಪರ ನಿಂತಿದ್ದಾರೆ. “ಸನಾತನ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ‘ಚಿಕ್ಕ ಮಗು’ ಉದಯನಿಧಿ ಸ್ಟಾಲಿನ್ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಸನಾತನ ಧರ್ಮದ ಕುರಿತಂತೆ ಇನ್ನೂ ಚಿಕ್ಕವನಾಗಿರುವ (Young Kid) ಉದಯನಿಧಿ ಸ್ಟಾಲಿನ್ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲರೂ ಅವನ ಮೇಲೆ ಮುಗಿಬಿದ್ದಿದ್ದಾರೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ. ಆದರೆ, ಅವರು ಯಾವುದೇ ಪಕ್ಷ ಅಥವಾ ಸಂಘಟನೆಯ ಹೆಸರು ಹೇಳಿಲ್ಲ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ ಬಳಿಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಳಿಬರುತ್ತಿರುವ ಆಕ್ರೋಶದ ಕುರಿತು ಕಮಲ್ ಹಾಸನ್ ಅವರು ಸಮಾರಂಭವೊಂದರಲ್ಲಿ ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"Young child is being targeted…," Kamal Haasan on 'Sanatana Dharma' row
— ANI Digital (@ani_digital) September 23, 2023
Read @ANI Story | https://t.co/4uFyHSXVep#SanatanaDharma #KamalHaasan #UdhayanidhiStalin pic.twitter.com/ylMZdZ0X8Z
ಸನಾತನ ಕುರಿತೂ ಕಮಲ್ ಹಾಸನ್ ಪ್ರತಿಕ್ರಿಯೆ
ಸನಾತನ ಧರ್ಮದ ಕುರಿತು ಕೂಡ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. “ನಾವೆಲ್ಲ ಪೆರಿಯಾರ್ ಅವರಿಂದ ಸನಾತನ ಎಂಬ ಪದವನ್ನು ಕೇಳಿದ್ದೇವೆ. ಪೆರಿಯಾರ್ ಅವರು ವಾರಾಣಸಿಯ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ತಿಲಕ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು. ಅಂತಹವರು ಎಲ್ಲವನ್ನೂ ಬಿಟ್ಟು ಸಮಾಜ ಸುಧಾರಣೆಗೆ ಇಳಿದರು. ಹಾಗಂತ, ಪೆರಿಯಾರ್ ಅವರನ್ನು ಡಿಎಂಕೆ ಸೇರಿ ಯಾವುದೇ ಪಕ್ಷವು ಸ್ವಂತ ಮಾಡಿಕೊಳ್ಳುವ ಹಾಗಿಲ್ಲ. ಅವರನ್ನು ಇಡೀ ತಮಿಳುನಾಡು ಸ್ವಂತ ಮಾಡಿಕೊಂಡಿದೆ” ಎಂದರು.
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
ಏನು ಹೇಳಿದ್ದರು ಉದಯನಿಧಿ ಸ್ಟಾಲಿನ್?
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.