Site icon Vistara News

Sanatana Dharma: ಸನಾತನವೊಂದೇ ಧರ್ಮ, ಉಳಿದೆಲ್ಲವೂ? ಯೋಗಿ ಆದಿತ್ಯನಾಥ್‌ ಹೇಳಿದ್ದಿಷ್ಟು

Yogi Adityanath

Yogi Adityanath's 'Ram Naam Satya' Warning To Those Involved In Crimes

ಲಖನೌ: ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ನೀಡಿದ ಹೇಳಿಕೆಯು ದೇಶಾದ್ಯಂತ ವಿವಾದ ಸೃಷ್ಟಿಸಿದೆ. ಬಿಜೆಪಿ ನಾಯಕರು, ಹಿಂದು ಸನ್ಯಾಸಿಗಳಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರವರೆಗೆ ಟೀಕಿಸುವುದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವವರೆಗೆ ಉದಯನಿಧಿ ಸ್ಟಾಲಿನ್‌ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಸನಾತನ ಧರ್ಮದ (Sanatana Dharma) ಕುರಿತು ಹೇಳಿಕೆ ನೀಡಿದ್ದಾರೆ. “ಸನಾತನವೊಂದೇ ಧರ್ಮವಾಗಿದ್ದು, ಉಳಿದೆಲ್ಲವೂ ಪಂಥಗಳಾಗಿವೆ” ಎಂದು ಹೇಳಿದ್ದಾರೆ.

ಶ್ರೀಮದ್‌ ಭಗವತ್‌ ಕಥಾ ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌, “ಸನಾತನವೊಂದೇ ಧರ್ಮವಾಗಿದೆ. ಉಳಿದೆಲ್ಲವೂ ಆರಾಧನೆಯ, ಪೂಜೆಯ ಪಂಥಗಳಾಗಿವೆ. ಸನಾತನವೊಂದೇ ಮಾನವತೆಯನ್ನು ಸಾರುವ ಧರ್ಮವಾಗಿದೆ. ಇದರ ಮೇಲೆ ದಾಳಿ ನಡೆಸಿದರೆ, ಜಗತ್ತಿನಲ್ಲಿರುವ ಮನುಕುಲವೇ ಬಿಕ್ಕಟ್ಟಿಗೆ ಸಿಲುಕುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಗವದ್ಗೀತೆ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್‌, “ಭಗವದ್ಗೀತೆಯು ಮನುಕುಲಕ್ಕೆ ದಾರಿದೀಪವಾಗಿದೆ. ಇದರಿಂದ ಮಾನವ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತಿದೆ. ಕೆಲವು ಕುತ್ಸಿತ ಹಾಗೂ ಸಂಕುಚಿತ ಮನಸ್ಸುಗಳು ಭಗವದ್ಗೀತೆಯ ಸಾರದ ಬಗ್ಗೆ ನಕಾರಾತ್ಮಕ ಮಾಹಿತಿಯನ್ನು ಹರಡುತ್ತವೆ. ಆದರೆ, ಮನುಕುಲಕ್ಕೆ ಭಗವದ್ಗೀತೆಯು ದೀವಿಗೆಯಾಗಿದೆ” ಎಂದು ಹೇಳಿದರು. ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮೋದಿ, “ಸನಾತನ ಧರ್ಮವನ್ನು ಒಡೆಯಲೆಂದೇ ಇಂಡಿಯಾ ಒಕ್ಕೂಟ ರಚಿಸಲಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್‌ ಹಾಸನ್

ಉದಯನಿಧಿ ಸ್ಟಾಲಿನ್‌ ಹೇಳಿದ್ದೇನು?

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

Exit mobile version