ಹೊಸದಿಲ್ಲಿ: ಡಿಎಂಕೆ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ “ಇಂಡಿಯಾ ಬ್ಲಾಕ್ʼ ಹಿಂದೂಗಳು ಮತ್ತು ‘ಸನಾತನ ಧರ್ಮ’ಕ್ಕೆ (Sanatana Dharma) ವಿರೋಧಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಟೀಕಿಸಿದ್ದಾರೆ.
ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಪ್ರಚೋದನಕಾರಿ ಹೇಳಿಕೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.
ʼʼಶತಮಾನ ಹಳೆಯದಾದ ಪಕ್ಷ (ಕಾಂಗ್ರೆಸ್) ಭಾರತವನ್ನು ಒಡೆಯಲು ಬಯಸುತ್ತಿರುವ ಗುಂಪುಗಳನ್ನು ಬೆಂಬಲಿಸುತ್ತಿದೆ. ಸಚಿವ ಸ್ಟಾಲಿನ್ ಹೇಳಿಕೆ ಕೇವಲ ಸನಾತನ ಧರ್ಮದ ವಿರುದ್ಧವಲ್ಲ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕರೆʼʼ ಎಂದು ಸೀತಾರಾಮನ್ ಹೇಳಿದರು.
ಇಂಡಿಯಾ ಬ್ಲಾಕ್‌ನ ಯಾವುದೇ ಘಟಕ ಪಕ್ಷವು ಡಿಎಂಕೆ ಸಚಿವರ ಮಾತುಗಳನ್ನು ಖಂಡಿಸಿಲ್ಲ. ಸನಾತನ ವಿರೋಧವು ಡಿಎಂಕೆಯ ಹಳೆಯ ನೀತಿ. ಅದನ್ನು ನಾನು ಖುದ್ದಾಗಿ ನೋಡಿದ್ದೇನೆ. ತಮಿಳುನಾಡಿನ ಜನ ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾಷೆಯ ಅಡೆತಡೆಯಿಂದ ಇದು ದೇಶದ ಉಳಿದವರಿಗೆ ಅರ್ಥವಾಗಿಲ್ಲ. ಅದು ಹಿಂದಿನಿಂದಲೂ ನಡೆದುಬಂದಿದೆ. ಈಗ ಸಾಮಾಜಿಕ ಜಾಲತಾಣಗಳಿಂದಾಗಿ ಅದು ಬಹಿರಂಗವಾಗಿದೆ. 70 ವರ್ಷಗಳಿಂದ ಡಿಎಂಕೆ ಈ ಬೂಟಾಟಿಕೆಯನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು “ಸಂವಿಧಾನದ ಅಪಹಾಸ್ಯ” ಎಂದು ನಿರ್ಮಲಾ ಕರೆದಿದ್ದಾರೆ.
“ಮಲೇರಿಯಾ, ಡೆಂಗ್ಯೂ ಮತ್ತು ಸೊಳ್ಳೆಗಳಂತೆ ಸನಾತನ (ಧರ್ಮ) ನಿರ್ಮೂಲನೆ ಮಾಡಬೇಕುʼʼ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಡಿಎಂಕೆ ನಾಯಕ ಎ ರಾಜಾ ಕೂಡ ‘ಸನಾತನ ಧರ್ಮ’ವನ್ನು ಸಾಮಾಜಿಕ ಕಳಂಕವನ್ನು ಹೊಂದಿರುವ ಏಡ್ಸ್ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಹೋಲಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: Sanatana Dharma: ಸನಾತನ ಧರ್ಮದ ನಿರ್ನಾಮವೇ ‘ಇಂಡಿಯಾ ಒಕ್ಕೂಟ’ದ ಗುರಿ; ಚಾಟಿ ಬೀಸಿದ ಮೋದಿ