ಲಖನೌ: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಮುಖಂಡರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸನಾತನ ಧರ್ಮದ (Sanatana Dharma) ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಹಕ್ಕು ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗಿಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು” ಎಂದು ಪಟ್ಟು ಹಿಡಿದಿದ್ದಾರೆ.
“ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಅವಹೇಳನಕಾರಿಯಾಗಿದೆ. ಜಗತ್ತಿನ ಅತಿ ಪುರಾತನ ಧರ್ಮದ ಬಗ್ಗೆ ಅವರು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು. ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಹಾಗೆಯೇ, ಬಿಜೆಪಿ ವಿರುದ್ಧ ರಚಿಸಿರುವ ಇಂಡಿಯಾ ಒಕ್ಕೂಟವು ಸನಾತನ ಧರ್ಮದ ಬಗ್ಗೆ ಅವರ ಅಭಿಪ್ರಾಯ, ನಿಲುವು ಏನು ಎಂಬುದನ್ನು ತಿಳಿಸಬೇಕು” ಎಂದು ಶಿಯಾ ಧರ್ಮಗುರು ಹಾಗೂ ಶಿಯಾ ಸುನ್ನಿ ಉಲೇಮಾ ಫ್ರಂಟ್ ಪ್ರಧಾನ ಕಾರ್ಯದರ್ಶಿ ಮೌಲಾನ ಹಬೀಬ್ ಹೈದರ್ ಆಗ್ರಹಿಸಿದರು.
ಅಖಿಲ ಭಾರತ ಮುಸ್ಲಿಂ ಜಮಾತ್ ಮೌಲಾನ ಅಧ್ಯಕ್ಷ ಶಾಹ್‌ಬುದ್ದೀನ್ ರಿಜ್ವಿ ಅವರು ಕೂಡ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ್ದಾರೆ. “ಯಾವುದೇ ಧರ್ಮವನ್ನು ಗುರಿಯಾಗಿಸಿ ಮಾತನಾಡುವ ಹಕ್ಕು ಉದಯನಿಧಿ ಸ್ಟಾಲಿನ್ ಅವರಿಗೆ ಇಲ್ಲ. ಇಂತಹ ಹೇಳಿಕೆಗಳು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತವೆ. ಜನರನ್ನು ಒಗ್ಗೂಡಿಸಲು ಧರ್ಮಗಳು ಇವೆಯೇ ಹೊರತು, ಜಾತಿ ಆಧಾರದ ಮೇಲೆ ವಿಭಜಿಸಲು ಅಲ್ಲ” ಎಂದು ಹೇಳಿದ್ದಾರೆ. ಇವರ ಜತೆಗೆ ಶಿಯಾ ಹಾಗೂ ಸುನ್ನಿ ಪಂಗಡಗಳ ಹಲವು ಧರ್ಮಗುರುಗಳು ಕೂಡ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: DMK MP A Raja: ಉದಯನಿಧಿ ಬಳಿಕ ಸನಾತನ ಧರ್ಮವನ್ನು ಏಡ್ಸ್, ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆಯ ಎ ರಾಜಾ
ಉದಯನಿಧಿ ಸ್ಟಾಲಿನ್ ಹೇಳಿದ್ದಿಷ್ಟು…
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು. ಉದಯನಿಧಿ ಸ್ಟಾಲಿನ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.