ಕೋಲ್ಕೊತಾ: ಪಶ್ಚಿಮ ಬಂಗಾಳದ (West Bengal) ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ರೈತರ ಕೃಷಿ ಜಮೀನು ಅತಿಕ್ರಮಣ ಸೇರಿ ಹಲವು ಪ್ರಕರಣಗಳಲ್ಲಿ ಬಂಧಿತನಾಗಿರುವ ಟಿಎಂಸಿ ಉಚ್ಚಾಟಿತ ನಾಯಕ ಶೇಖ್ ಶಹಜಹಾನ್‌ನನ್ನು ಸಿಬಿಐ ಕಸ್ಟಡಿಗೆ ವಹಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್ ಮತ್ತೆ ಆದೇಶ ಹೊರಡಿಸಿದೆ. ಈಗ ಸಿಬಿಐ ಅಧಿಕಾರಿಗಳು ಕೋಲ್ಕೊತಾದಲ್ಲಿರುವ ಪೊಲೀಸ್ ಕೇಂದ್ರ ಕಚೇರಿಯಲ್ಲಿದ್ದು, ಶೀಘ್ರದಲ್ಲೇ ಶೇಖ್ ಶಹಜಹಾನ್‌ನನ್ನು ಸಿಬಿಐ ವಶಕ್ಕೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಶೇಖ್ ಶಹಜಹಾನ್‌ನನ್ನು ಮಂಗಳವಾರವೇ (ಮಾರ್ಚ್ 5) ಸಿಬಿಐ ವಶಕ್ಕೆ ನೀಡಬೇಕು. ಇ.ಡಿ ಅಧಿಕಾರಿಗಳ ಮೇಲೆ ದಾಳಿ, ಲೈಂಗಿಕ ದೌರ್ಜನ್ಯ ಸೇರಿ ಎಲ್ಲ ಪ್ರಕರಣಗಳ ಕುರಿತ ದಾಖಲೆಗಳನ್ನು ಕೂಡ ಸಿಬಿಐ ಅಧಿಕಾರಿಗಳಿಗೆ ನೀಡಬೇಕು ಎಂದು ಕೋಲ್ಕೊತಾ ಹೈಕೋರ್ಟ್ ಆದೇಶಿಸಿತ್ತು. ಆದರೆ, ಶೇಖ್ ಶಹಜಹಾನ್‌ನನ್ನು ಸಿಬಿಐಗೆ ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತ್ತು. ಅಷ್ಟೇ ಅಲ್ಲ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಕೋಲ್ಕೊತಾ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಹಾಗಾಗಿ, ಈಗ ಹೈಕೋರ್ಟ್ ಮತ್ತೆ ಆದೇಶ ಹೊರಡಿಸಿದೆ.
Handover of Sandeshkhali accused Shahjahan Sheikh to CBI | Calcutta High Court observes that state police have played hide and seek in the matter. The accused is a highly political influencer. The investigation should be handed over to CBI and the custody of the accused by 4:15… pic.twitter.com/mON31HihnF
— ANI (@ANI) March 6, 2024
12 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಶಹಜಹಾನ್ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್, ಬ್ಯಾಂಕ್ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇದರಿಂದಾಗಿ ಶಹಜಹಾನ್ ಶೇಖ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ; ಟಿಎಂಸಿಯ ಶಹಜಹಾನ್‌ನನ್ನು ಸಿಬಿಐಗೆ ವಹಿಸಿ ಎಂದು ಕೋರ್ಟ್ ಆದೇಶ
ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು, ಶಹಜಹಾನ್ ಶೇಖ್ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಂಡಿದೆ. ಇದಾದ ಬಳಿಕ, ಶಹಜಹಾನ್ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್ ಆದೇಶ ನೀಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಶಹಜಹಾನ್ ಶೇಖ್ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್ ಆಗಿ ಹೇಳಿತ್ತು. ಇ.ಡಿ ಅಧಿಕಾರಿಗಳ ದಾಳಿ ಸೇರಿ ಎಲ್ಲ ಪ್ರಕರಣಗಳು, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ