Site icon Vistara News

Sandeskhali ED Attack: ಸಂದೇಶಖಾಲಿ ಪ್ರಕರಣ; ಮತ್ತೆ ಮೂವರನ್ನು ಬಂಧಿಸಿದ ಸಿಬಿಐ

ed

ed

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಜನವರಿ 5ರಂದು ಜಾರಿ ನಿರ್ದೇಶನಾಲಯ(Enforcement Directorate)ದ ತಂಡದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರನ್ನು ಸಿಬಿಐ ಶನಿವಾರ ಬಂಧಿಸಿದೆ (Sandeskhali ED Attack). ಈ ಮೂವರಲ್ಲಿ ಅಮಾನತುಗೊಂಡ ಟಿಎಂಸಿ ಮುಖಂಡ ಶಹಜಹಾನ್ ಶೇಖ್ (Shajahan Sheikh)ನ ಸಹೋದರ ಕೂಡ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಶಹಜಹಾನ್ ಶೇಖ್‌ನ ಸಹೋದರ ಶೇಖ್ ಅಲೋಮ್ಗಿರ್, ಸಂದೇಶಖಾಲಿಯ ಟಿಎಂಸಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಫುಜರ್ ಮೊಲ್ಲಾ ಮತ್ತು ಸ್ಥಳೀಯ ಸಿರಾಜುಲ್ ಮೊಲ್ಲಾನನ್ನು ಭಾನುವಾರ (ಮಾರ್ಚ್‌ 17) ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ದಾಖಲಿಸಿದ ಮೂರು ಎಫ್ಐಆರ್‌ಗಳನ್ನು ಸಿಬಿಐ ಪರಿಶೀಲಿಸಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಿಬಿಐ ಈ ಮೂವರನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿದೆ. ಈ ಮೂವರು ಜನವರಿ 5ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ನಡೆದ ದಾಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು ಮತ್ತು ಸಂದೇಶಖಾಲಿಯಲ್ಲಿರುವ ಶಹಜಹಾನ್ ಶೇಖ್ ಮನೆಗೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದಾಗ ಅವರನ್ನು ಗುರಿಯಾಗಿಸಲು ಜನಸಮೂಹವನ್ನು ಪ್ರಚೋದಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪ ಹೊತ್ತು ತಲೆ ಮರೆಸಿಕೊಂಡಿದ್ದ ಶಹಜಹಾನ್ ಶೇಖ್‌ನನ್ನು ಕೊನೆಗೂ ಫೆಬ್ರವರಿ 29ರಂದು ಬಂಧಿಸಲಾಗಿತ್ತು. ಆತನ ವಿರುದ್ಧದ ಆರೋಪಗಳ ತನಿಖೆಯನ್ನು ಸಿಐಡಿ ವಹಿಸಿಕೊಂಡಿತ್ತು. ನಂತರ ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಏನಿದು ಪ್ರಕರಣ?

ಜನವರಿ 5ರಂದು ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಂದೇಶ್‌ಖಾಲಿಯಲ್ಲಿರುವ ಆರೋಪಿ ಶೇಖ್‌ ಶಹಜಹಾನ್‌ ನಿವಾಸಕ್ಕೆ ದಾಳಿ ನಡೆಸಲು ಆಗಮಿಸಿದ್ದರು. ಬಹುಕೋಟಿ ರೂ. ಪಡಿತರ ವಿತರಣೆ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಟಿಎಂಸಿಯ ಪ್ರಭಾವಶಾಲಿ ನಾಯಕ, ಜಿಲ್ಲಾ ಪರಿಷತ್‌ ಸದಸ್ಯನೂ ಆಗಿದ್ದ ಶೇಖ್‌ ಶಹಜಹಾನ್ ಮನೆಗೆ ಇಡಿ ಅಧಿಕಾರಿಗಳು ದಾಳಿಯಿಟ್ಟಿದ್ದರು. ಆದರೆ ಕೂಡಲೇ ಅಲ್ಲಿ ಶಹಜಹಾನ್‌ನ ಬೆಂಬಲಿಗರು ಸೇರಿ ಇ.ಡಿ ಅಧಿಕಾರಿಗಳನ್ನು ತಡೆದದ್ದಲ್ಲದೆ, ಹಲ್ಲೆ ನಡೆಸಿದರು. ಅಧಿಕಾರಿಗಳು ಹೇಗೋ ಜೀವ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಬೇಕಾಯಿತು. ಇದಾದ ಬಳಿಕ ಶಹಜಹಾನ್‌ ಅಲ್ಲಿಂದಲೂ ನಾಪತ್ತೆಯಾಗಿದ್ದ.

ಇದನ್ನೂ ಓದಿ: ED Raids: ಸಂದೇಶಖಾಲಿಯ ವಿವಿಧೆಡೆ ಇ.ಡಿ ದಾಳಿ; ಶೇಖ್ ಶಹಜಹಾನ್‌ನ ಸಹಚರರ ನಿವಾಸಗಳಲ್ಲಿ ಶೋಧ

ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆದದ್ದು ದೇಶಾದ್ಯಂತ ಸುದ್ದಿಯಾಯಿತು. ಬಿಜೆಒಇ ಹಾಗೂ ರಾಜ್ಯ ವಿಪಕ್ಷಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದನಿಯೆತ್ತಿದವು. ಇದರಿಂದ ದೌರ್ಜನ್ಯಕ್ಕೊಳಗಾಗಿದ್ದ ಸ್ಥಳೀಯ ಮಹಿಳೆಯರಿಗೂ ಧ್ವನಿ ಬಂದಂತಾಯಿತು. ಸಂತ್ರಸ್ತ ಮಹಿಳೆಯರು ಒಟ್ಟು ಸೇರಿದರು. ಶಹಜಹಾನ್‌ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರು. ಕೂಡಲೇ ರಾಷ್ಟ್ರೀಯ ಮಾಧ್ಯಮದ ಗಮನ ಈ ಮಹಿಳೆಯರ ಕಡೆಗೆ ತಿರುಗಿತು. ಈ ಮಹಿಳೆಯರು ಶೇಖ್‌ ಶಹಜಹಾನ್‌ ಹಾಗೂ ಆತನ ಬೆಂಬಲಿಗರು, ತೃಣಮೂಲ ಕಾರ್ಯಕರ್ತರು ಸಂದೇಶ್‌ಖಾಲಿಯಲ್ಲಿ ನಡೆಸುತ್ತಿದ್ದ ಬರ್ಬರ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಶಹಜಹಾನ್‌ ಶೇಖ್‌ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿತ್ತು. ಶಹಜಹಾನ್‌ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿತ್ತು. ನಂತರ ಆತನನ್ನು ಬಂಧಿಸಲಾಗಿತ್ತು.

Exit mobile version