Site icon Vistara News

ಜಮ್ಮು-ಕಾಶ್ಮೀರದ ಇದೊಂದು ಹಳ್ಳಿಯ ಜನ ಇಂದು ರಂಜಾನ್​ ಆಚರಿಸಲೇ ಇಲ್ಲ; 8 ಕಿಮೀ ದೂರದಲ್ಲಿ ನಡೆದ ದುರ್ಘಟನೆಯ ನೋವು

Sangiote village people not celebrated Eid Over Poonch terror attack

#image_title

ಶ್ರೀನಗರ: ಭಾರತ ಸೇರಿ ವಿಶ್ವದ ಎಲ್ಲ ಕಡೆ ಇಂದು ಮುಸ್ಲಿಮರು ಈದ್ ಉಲ್​ ಫಿತರ್​ ಹಬ್ಬವನ್ನು ಸಂಭ್ರಮವನ್ನು ಆಚರಿಸಿದ್ದರೆ, ಜಮ್ಮು-ಕಾಶ್ಮೀರದ ಒಂದು ಹಳ್ಳಿ ಮಾತ್ರ ಹಬ್ಬದ ಆಚರಣೆಯಿಂದ ದೂರವೇ ಉಳಿದಿದೆ. ಏಪ್ರಿಲ್​ 21ರಂದು ಮಧ್ಯಾಹ್ನ ಪೂಂಚ್​​ನ ಭಾಟಾ ಡೋರಿಯಾ ಬಳಿಯ ದಟ್ಟ ಅರಣ್ಯದ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿ, ಐವರು ಯೋಧರು ಮೃತಪಟ್ಟಿದ್ದಾರೆ. ಈ ದುರ್ಘಟನೆಯ ಕಾರಣಕ್ಕೇ ಮನನೊಂದಿರುವ ಸಾಂಗಿಯೋಟ್ ಎಂಬ ಹಳ್ಳಿಯ ಜನರು ತಾವು ಯಾವ ಕಾರಣಕ್ಕೂ ರಂಜಾನ್ ಹಬ್ಬ ಆಚರಿಸುವುದಿಲ್ಲ. ಕೇವಲ ನಮಾಜ್ ಮಾಡುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ.

ಗುರುವಾರ ಸಂಜೆ 7ಗಂಟೆ ಹೊತ್ತಿಗೆ ಸಾಂಗಿಯೋಟ್ ಗ್ರಾಮದಲ್ಲಿ ಈದ್ ಉಲ್ ಫಿತರ್​ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 4000 ಜನರು ಪಾಲ್ಗೊಳ್ಳುವವರಿದ್ದರು. ಹೀಗಾಗಿ ಅಗತ್ಯ ವಸ್ತುಗಳನ್ನು ತರುವ ಜವಾಬ್ದಾರಿಯನ್ನು ಸೇನೆಯ ರಾಷ್ಟ್ರೀಯ ರೈಫಲ್ಸ್​ ಘಟಕದವರು ಹೊತ್ತಿದ್ದರು. ಅದರಂತೆ ಬಾಲಾಕೋಟ್​​ನ ಬಸೂನಿಯಲ್ಲಿರುವ ರಾಷ್ಟ್ರೀಯ ರೈಫಲ್ಸ್​ನ ಪ್ರಧಾನ ಕಚೇರಿಯಿಂದ ಹೊರಟ ಈ ಸೇನಾ ವಾಹನ ಹಣ್ಣುಗಳು ಮತ್ತು ಇತರ ವಸ್ತುಗಳನ್ನೆಲ್ಲ ಹೊತ್ತು ಸಾಗುತ್ತಿತ್ತು. ಮಾರ್ಗಮಧ್ಯೆ ಭಿಂಬರ್​ ಗಲಿ ಎಂಬಲ್ಲಿ ಇನ್ನಷ್ಟು ವಸ್ತುಗಳನ್ನು ವಾಹನಕ್ಕೆ ತುಂಬಿಕೊಳ್ಳಬೇಕಾಗಿದ್ದರಿಂದ ಟ್ರಕ್​ನ್ನು ನಿಲ್ಲಿಸಲಾಗಿತ್ತು.

ಪೂಂಚ್​ ಮತ್ತು ರಾಜೌರಿ ನಡುವಿನ ಈ ಪ್ರದೇಶದಲ್ಲಿ ಸೇನಾ ಬೆಂಗಾವಲು ವಾಹನಗಳ ಚಲನೆ ಸದಾ ಇರುತ್ತದೆ. ಹೀಗಾಗಿ ರಾಷ್ಟ್ರೀಯ ರೈಫಲ್ಸ್​ ಸಿಬ್ಬಂದಿಯೂ ಇಲ್ಲಿ ಸಕ್ರಿಯರಾಗಿ ಉಪಸ್ಥಿತರಿರುತ್ತಾರೆ. ಇದೇ ಕಾರಣಕ್ಕೆ ತಮ್ಮ ಎಂದಿನ ಜಾಗದಲ್ಲೇ ಟ್ರಕ್​ ನಿಲ್ಲಿಸಿಕೊಂಡಿದ್ದರು. ಅಲ್ಲಿಂದ ಸಾಂಗಿಯೋಟ್ ಗ್ರಾಮ ಕೇವಲ 8ಕಿಮೀ ಅಷ್ಟೇ. ಆದರೆ ಅಲ್ಲಿಗೆ ತಲುಪುವ ಮೊದಲೇ ಆ ಟ್ರಕ್​ ಉಗ್ರರ ದಾಳಿಗೆ ಹೊತ್ತಿ ಉರಿದಿದೆ. ಯೋಧರ ಜೀವ ಹೋಗಿದೆ. ಹೀಗೆ ಗ್ರಾಮದಲ್ಲಿ ನಡೆಯಬೇಕಿದ್ದ ಸಂತೋಷ ಕೂಟಕ್ಕೆ ಹಣ್ಣು/ಸಿಹಿ ಇನ್ನಿತರ ವಸ್ತುಗಳನ್ನು ತರುತ್ತಿದ್ದವರು ಬಲಿಯಾದರಲ್ಲ ಎಂಬ ಕಾರಣಕ್ಕೆ ಹಳ್ಳಿಯ ಜನರು ರಂಜಾನ್​ ಆಚರಣೆಯಿಂದ ದೂರ ಸರಿದಿದ್ದಾರೆ.

ಇದನ್ನೂ ಓದಿ: Poonch Terror Attack: ಸೇನಾ ವಾಹನದ ಮೇಲೆ ದಾಳಿ ಮಾಡಿದ್ದು ಲಷ್ಕರೆ ತೊಯ್ಬಾದ 7 ಉಗ್ರರು; ಅರಣ್ಯದಲ್ಲಿ ಕಾದು ಕುಳಿತು ಅಟ್ಯಾಕ್​

‘ನಾವು ಶನಿವಾರ ಈದ್​ ಹಬ್ಬ ಆಚರಿಸುತ್ತಿಲ್ಲ. ನಮಾಜ್ ಮಾತ್ರ ಮಾಡುತ್ತೇವೆ ಎಂದು ಶುಕ್ರವಾರವೇ ಅಲ್ಲಿನ ಪಂಚಾಯಿತಿಯ ಸರಪಂಚ್​ ಮುಖ್ತಿಯಾಜ್​ ಖಾನ್ ಹೇಳಿದ್ದರು. ‘ಇದೀಗ ಮೃತಪಟ್ಟ ರಾಷ್ಟ್ರೀಯ ರೈಫಲ್ಸ್​​ ಘಟಕದ ಯೋಧರು ನಮ್ಮ ಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳ ರಕ್ಷಣೆಗೇ ನಿಯೋಜಿತಗೊಂಡಿದ್ದವರು. ಅವರ ಜೀವ ಹೋಗಿದ್ದು ನಮಗೆ ನೋವು ತಂದಿದೆ. ಹೀಗಾಗಿ ಹಬ್ಬ ಆಚರಣೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಅಂದಹಾಗೇ, ಉಗ್ರರು ಟ್ರಕ್​ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ಮಾಡಿದ್ದು, ದಾಳಿಗೆ ಬಳಸಲಾದ ಕೆಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಏಳು ಮಂದಿ ಉಗ್ರರು ಸೇರಿ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಶ್ವಾನದಳ, ಡ್ರೋನ್​, ಹೆಲಿಕಾಪ್ಟರ್​​ಗಳ ಸಹಾಯ ತೆಗೆದುಕೊಳ್ಳಲಾಗುತ್ತಿದ್ದು, ಸುಮಾರು 2000 ಕಮಾಂಡೋಗಳು ಉಗ್ರಬೇಟೆಯಲ್ಲಿ ತೊಡಗಿದ್ದಾರೆ.

Exit mobile version