ಮುಂಬೈ: ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ಯಾವಾಗಲೂ ವಿವಾದಗಳಿಂದಲೇ ಸುದ್ದಿಯಾದರೂ ಅವರು ವಿಭಿನ್ನ ವ್ಯಕ್ತಿತ್ವ, ಮನೋಜ್ಞ ನಟನೆ, ಖಡಕ್ ಮಾತಿನಿಂದಲೇ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ, ಅವರು ಹವ್ಯಾಸಗಳಿಂದಲೂ, ಗಾಸಿಪ್‌ಗಳಿಂದಲೂ ಸುದ್ದಿಯಾಗುತ್ತಾರೆ. ’ಒಮ್ಮೆ ಧರಿಸಿದ ಬಟ್ಟೆ ಮತ್ತೆ ಧರಿಸದ ಸಂಜಯ್ ದತ್’ ಎಂದೇ ಖ್ಯಾತಿಯಾಗಿದ್ದ ಅವರು ಜೈಲಿನಲ್ಲಿ ಹರಿದ ಬಟ್ಟೆಯನ್ನು ಧರಿಸುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಹೌದು, ಯಾವುದೇ ದಿರಸು ಇರಲಿ, ಅದು ಎಷ್ಟೇ ದುಬಾರಿ ಆಗಿರಲಿ, ಸಂಜಯ್ ದತ್ ಅವರು ಅದನ್ನು ಧರಿಸಿದರೆ ಮತ್ತೆ ಧರಿಸುವುದಿಲ್ಲ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಇತ್ತು. ಆದರೆ, 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅವರಿಗೆ 2007ರಲ್ಲಿ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. 2013ರಲ್ಲಿ ಈ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿಯಿತು. ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ ಕಾರಣ ಟಾಡಾ ಕಾಯ್ದೆ (TADA Act) ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿ, ಕೊನೆಗೆ ಅವರು ಜೈಲು ಸೇರಿದರು. 2013ರಿಂದ 2016ರವರೆಗೆ ಸಂಜಯ್ ದತ್ ಅವರು ಪುಣೆ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. “ಜೈಲಿನಲ್ಲಿ ಸಂಜಯ್ ದತ್ ಅವರು ಹರಿದ ಬಟ್ಟೆಯನ್ನೇ ಧರಿಸುತ್ತಿದ್ದರು” ಎಂದು ಈಗ ಅವರ ಪರ ವಕೀಲ ಪ್ರದೀಪ್ ರೈ ಮಾಹಿತಿ ನೀಡಿದ್ದಾರೆ.
“ಜೈಲಿನಲ್ಲಿದ್ದಾಗ ಸಂಜಯ್ ದತ್ ಅವರ ಜೀವನ ವಿಧಾನವೇ ಬದಲಾಗಿ ಹೋಯಿತು. ಅವರು ಜೈಲಿನಲ್ಲಿ ಸಕಾರಾತ್ಮಕ ಮನೋಭಾವ ಹೊಂದಿದ್ದರೂ ಪರಿಸ್ಥಿತಿ ಬದಲಾಗಿತ್ತು. ಅವರು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಧರಿಸುತ್ತಿರಲಿಲ್ಲ. ಆದರೆ, ಜೈಲಿನಲ್ಲಿ ಅವರು ಹರಿದ ಬಟ್ಟೆಯನ್ನೇ ಧರಿಸುತ್ತಿದ್ದರು. ಜೈಲಿನ ಬಟ್ಟೆಗೆ ಹಲವು ರಂಧ್ರಗಳು ಇದ್ದರೂ, ಅದನ್ನೇ ಧರಿಸುತ್ತಿದ್ದರು. ಜೈಲಿನಲ್ಲಿ ಬೇರೆ ಬಟ್ಟೆ ನೀಡದಿದ್ದಾಗ ಅವರು ಹೀಗೆ ಮಾಡುತ್ತಿದ್ದರು. ಇಂತಹ ಹಲವು ಸಂಗತಿಗಳನ್ನು ಅವರು ಎದುರಿಸಿದರು. ಕೆಲವನ್ನು ನಾನು ಹೇಳಲು ಆಗುವುದಿಲ್ಲ” ಎಂದು ಪ್ರದೀಪ್ ರೈ ಹೇಳಿದ್ದಾರೆ.
ಇದನ್ನೂ ಓದಿ: Sanjay Dutt: ಸೌತ್ ಸಿನಿಮಾ ಆಯ್ತು ಈಗ ಪಂಜಾಬಿ ಸಿನಿಮಾದತ್ತ ಸಂಜಯ್ ದತ್!
ಮುನ್ನಾಭಾಯಿ ಎಂಬಿಬಿಎಸ್ ಸೇರಿ ಹಲವು ಸಿನಿಮಾಗಳ ಮೂಲಕ ಬಾಲಿವುಡ್ ನಟ ಸಂಜಯ್ ದತ್ ಮನೆಮಾತಾಗಿದ್ದಾರೆ. ಖಡಕ್ ಧ್ವನಿ, ನೇರ ನೋಟ ಸೇರಿ ಹಲವು ರೀತಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹತ್ತಾರು ವಿವಾದಗಳು, ಜೈಲು ವಾಸ, ಕಾಯಿಲೆಯ ಬಳಿಕವೂ ಅವರು ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಪಂಜಾಬಿ ಸೇರಿ ಹಲವು ಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ